ರಾಜಿ ಸಂಧಾನಕ್ಕೆ ಹೈಕೋರ್ಟ್ ಆದೇಶ, ಮೆಟ್ರೋ ನೌಕರರ ಮುಷ್ಕರ ಮುಂದೂಡಿಕೆ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 22ರಿಂದ ಪ್ರಾರಂಭವಾಗಬೇಕಾಗಿದ್ದ ಮೆಟ್ರೋ ನೌಕರರ ಮುಷ್ಕರ ಒಂದು ತಿಂಗಳ ಕಾಲ ಮುಂದೂಡಲ್ಪಟ್ಟಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನೌಕರರ ಸಂಘವು ಈ ಸಂಬಂಧ ಕರ್ನಾಟಕ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಮೆಟ್ರೋ ನೌಕರರ ವಿರುದ್ಧ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-2013 (ಎಸ್ಮಾ) ಜಾರಿಗೊಳಿಸದಂತೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಕೋರಿ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸೇಗೌಡ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ.
"ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ. ಮೆಟ್ರೋ ನೌಕರರು ಸೌಹಾರ್ದಯುತವಾಗಿ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಸಲಹೆಗೆ ಒಪ್ಪಿರುವ ಮೆಟ್ರೋ ನೌಕರರ ಸಂಗವು ಉದ್ದೇಶಿತ ಮುಷ್ಕರವನ್ನು ಒಂದು ತಿಂಗಳ ಕಾಲ ಮುಂದೂಡಿದೆ.
"ಸರ್ಕಾರವು ಮೆಟ್ರೋ ನೌಕರರನ್ನು ಎಸ್ಮಾ ವ್ಯಾಪ್ತಿಗೆ ತಂದಿದೆ. ಇದಾಗಿ ನೌಕರರು ಇದೇ 22ರಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಸ್ಮಾ ಜಾರಿ ಸಂಬಂಧ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಬೇಕು ಎಂದು ಸರ್ಕಾರದ ಹೆಚ್ಚುವರಿ ಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಮೆಟ್ರೋ ನಿಗಮವು ನೌಕರರ ಬೇಡಿಕೆಗಳನ್ನು ಈಡೇರಿಸುವ ಆಸಕ್ತಿ ತಾಳುತ್ತಿಲ್ಲ. ಸರ್ಕಾರ ಮೆಟ್ರೋ ನೌಕರರ ಸಂಘಕ್ಕೆ ಮಾನ್ಯತೆ ನಿಡಬೇಕಿದೆ ಅಲ್ಲದೆ ನ್ಯಾಯಾಲಯವು ಎಸ್ಮಾ ಗೆ ನೀಡಿದ ತಡೆಯಾಜ್ಞೆಯನ್ನು ತೆರವು ಮಾಡಬಾರದು ಎಂದು ನೌಕರರ ಸಂಗದ ಪರ ವಕೀಲರು ಮನವಿ ಸಲ್ಲಿಸಿದ್ದರು.
ಇದಾಗಿ ವಾದಗಳನ್ನು ಆಲಿಸಿದ ನ್ಯಾಯಪೀಠವು ಪರಸ್ಪರ ರಾಜಿ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿರಿ. ವಾರದಲ್ಲಿ ಮೂರು ಬಾರಿ ಉಭಯ ಗುಂಪುಗಳ ಮುಖಂಡರು ಪರಸ್ಪರ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಿ ಎಂದು ಆದೇಶಿಸಿದೆ.
ತೀರ್ಪುಇ ಬಳಿಕ ಮಾತನಾಡಿದ ಬಿಎಂಆರ್‌ಸಿಎಲ್ ವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ "ನಾವು ಮುಷ್ಕರವನ್ನು ಸ್ಥಗಿತಗೊಳಿಸುತ್ತೇವೆ. ಸಾರ್ವಜನಿಕರಿಗೆ ಯಾವ ತೊಂದರೆಯಾಗುವುದಿಲ್ಲ. ಮಾತುಕತೆಗೆ ನಾವೆಂದೂ ಸಿದ್ದರಿದ್ದೇವೆ ಎಂದು ನಾವು ಹಿಂದೆಯೇ ಹೇಳಿದ್ದೆವು. ನ್ಯಾಯಾಲಯ ಆದೇಶಿಸಿದಂತೆಯೇ ಪರಸ್ಪರ ಸಂಧಾನ ಮಾತುಕತೆಯಲ್ಲಿ ವಿವಾದ ಬಗೆಹರಿಸಿಕೊಳ್ಳಲಿದ್ದೇವೆ" ಎಂದರು.