ರಾಜ್ಯ

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ

Raghavendra Adiga
ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ 2020ರ ಅಂತ್ಯದ ವೇಳೆಗೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸುಗಮವಾಗಲಿದೆ. ಎರದೂ ನಗರಗಳ ನಡುವೆ ಆರು ಲೇನ್ ಗಳ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಿಲೀಪ್ ಬಿಲ್ಡ್ ಕಾನ್ ಲಿ. ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2.5 ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಪ್ರಾಧಿಕಾರವು ಸಂಸ್ಥೆಗೆ ಗಡುವು ಹಾಕಿದೆ.
ಒಟ್ಟು 117 ಕಿಮೀ ರಸ್ತೆ ನಿರ್ಮಾಣಕ್ಕಾಗಿ  6,212.785 ಕೋಟಿ ರೂ. ವೆಚ್ಚವಾಗಲಿದ್ದು ಹೈಬ್ರಿಡ್ ಆನ್ಯೂಟಿ ಮೋಡ್ ನಲ್ಲಿ ಲೇನ್ ನಿರ್ಮಾಣವಾಗಲಿದೆ ಎಂದು ಎನ್ಎಚ್ಎಐ ಹೇಳಿದೆ. ಯೋಜನೆ ಸಂಪೂರ್ಣಗೊಂಡ ಬಳಿಕ ಬೆಂಗಳೂರು-ಮೈಸೂರು ಪ್ರಯಾಣದ ಅವಧಿ 90 ನಿಮಿಷಕ್ಕೆ ತಗ್ಗಲಿದೆ ಎಂದು ಪಿಡಬ್ಲ್ಯೂ ಡಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಒಂಬತ್ತು ಪ್ರಮುಖ ಸೇತುವೆಗಳು, 44 ಚಿಕ್ಕ ಸೇತುವೆಗಳು, ನಾಲ್ಕು ರೈಲ್ವೆ ರಸ್ತೆ ಓವರ್ ಬ್ರಿಡ್ಜ್ ಗಳು ಈ ಲೇನ್ ನಡುವೆ ಇರಲಿದೆ. 2.5 ವರ್ಷಗಳ ನಿರ್ಮಾಣದ ಅವಧಿ ಸೇರಿದಂತೆ 17.5 ವರ್ಷಗಳ ಅವಧಿಗೆ ರಿಯಾಯಿತಿ ನೀಡಲಾಗಿದೆ.
ಯೋಜನೆಯಲ್ಲಿ ಐದು ಬೈಪಾಸ್ ನಿರ್ಮಾಣ ಕಾಮಗಾರಿಗಳೂ ಸಹ ಸೇರಿದ್ದು ಬಿಡದಿ, ರಾಮನಗರ, ಮತ್ತು ಚೆನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಬೈಪಾಸ್ ನಿರ್ಮಾಣವಾಗಲಿದೆ. ಹೆದ್ದಾರಿಯು ಸಂಪೂರ್ಣವಾಗಿ ಆಕ್ಸೆಸ್ ಕಂಟ್ರೋಲ್ ಸೌಲಭ್ಯ ಹೊಂದಿರಲಿದೆ. ಜತೆಗೆ ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನೂ ಒಳಗೊಳ್ಳಲಿದೆ.  ಪ್ರಯಾಣಿಕರ ಸುರಕ್ಷತೆ ಗಮನದಲ್ಲಿರಿಸಿಕೊಂಡು ರಸ್ತೆಯಲ್ಲಿ ಅಂಡರ್ ಪಾಸ್, ಓವರ್ ಪಾಸ್ ಗಳ ನಿರ್ಮಾಣ ಹಾಗೂ ಅವುಗಳಲ್ಲಿ ಲೈಟಿಂಗ್ ವ್ಯವಸ್ಥೆ ಸಹ ಕಲ್ಪಿಸಿಕೊಡಲಾಗುವುದು.
ಅಲ್ಲದೆ ಯೋಜನೆಯಡಿಯಲ್ಲಿ ಒಂದು ವಿಶ್ರಾಂತಿ ತಾಣ, 66 ಬಸ್ ಶೆಲ್ಟರ್ (ತಂಗುದಾಣ) ವನ್ನು ನಿರ್ಮಿಸಲಾಗುತ್ತದೆ. ಇಡಿಯ ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು ಬೆಂಗಳೂರು-ನಿಡಘಟ್ಟ ಹಾಗೂ ನಿಡಘಟ್ಟ-ಮೈಸೂರು ಎಂದು ವಿಭಜಿಸಲಾಗಿದೆ.
ಹೈಬ್ರೀಡ್ ಆನ್ಯೂಟಿ ಮಾಡೆಲ್
ಹೈಬ್ರೀಡ್ ಆನ್ಯೂಟಿ ಮಾಡೆಲ್ ನಲ್ಲಿ ಯೋಜನೆಯ ವೆಚ್ಚದಲ್ಲಿ 40% ರಷ್ಟು ಸರ್ಕಾರವು ಒದಗಿಸಲಿದೆ ಇನ್ನುಳಿದದ್ದನ್ನು ಸ್ವತ್ತುಗಳ ಆಧಾರದ ಮೇಲೆ, ಡೆವಲಪರ್ಸ್ ಕಾರ್ಯಕ್ಷಮತೆಯ ಮೇಲೆ ನಿರ್ಧರಿಸಲಾಗುತ್ತದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಹಕ್ಕುಗಳನ್ನು ತಾನೇ ಉಳಿಸಿಕೊಳ್ಳಲಿದೆ. ಯೋಜನೆ ಡೆವಲಪರ್ಸ್ 40% ಪಾಲನ್ನು ಪಡೆಯಲಿದ್ದಾರೆ. ಉಳಿದ ಪಾಲನ್ನು ಸಾಲ ಅಥವಾ ಇಕ್ವಿಟಿಯ ರೂಪದಲ್ಲಿ ಸಂಗ್ರಹಿಸಬೇಕಿದೆ. 
SCROLL FOR NEXT