ಬೆಂಗಳೂರು; ಚೆಮ್ಮನೂರ್ ಚಿನ್ನಾಭರಣ ಮಳಿಗೆಗಳಿಗೆ ಕನ್ನ ಹಾಕುತ್ತಿದ್ದ ಯುಪಿಎಸ್ ಆಕಾಂಕ್ಷಿ ಸೇರಿದಂತೆ ನಾಲ್ವರು ಆರೋಪಿಗಳು 7 ವರ್ಷಗಳ ಬಳಿಕ ಸುಬ್ರಹ್ಮಣ್ಯ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೊತ್ತನೂರು ನಿವಾಸಿ ಸಾಮ್ರಾಟ್ ಶಿವಮೂರ್ತಿ ಅಲಿಯಾಸ್ ಶಿವು (30) ಈ ಗ್ಯಾಂಗ್'ನ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತನ ಸಹೋದರ ಶಂಕರ್ (26) ಮತ್ತು ನಿವೇಶ್ ಕುಮಾರ್ (29), ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜಗದೀಶ್ (34) ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳು ಕಳೆದ ಫೆ.19ರಂದು ರಾಜಾಜಿನಗರದಲ್ಲಿರುವ ಚೆಮ್ಮನೂರ್ ಜ್ಯುವೆಲರ್ಸ್ ಮಳಿಗೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆಸಲಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಮ್ರಾಟ್ ಮತ್ತು ಶಂಕರ್ ಸಹೋದರ ತಂದೆ ಜ್ಯೋತಿಷಿಯಾಗಿದ್ದಾರೆ. ಸಾಮ್ರಾಟ್ 8ನೇ ತರಗತಿಯ ಪರೀಸ್ಖೆಯಲ್ಲಿ ನಕಲು ಮಾಡಿ ಶಿಕ್ಷಕರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಶಾಲೆಯನ್ನೇ ಬಿಟ್ಟು ಎರಡೂವರೆ ವರ್ಷ ಮನೆ ತೊರೆದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಬಳಿಕ ಮನೆ ಸೇರಿದ್ದ ಆರೋಪಿ ತಂದೆಯ ವೃತ್ತಿಯನ್ನೇ ಮುಂದುವರೆಸಿದ್ದ.
ಶಂಕರ್ ಬಿಕಾಂ ಪದವೀಧರನಾಗಿದ್ದ. ಸ್ಕಾರ್ಪಿಯೋ ಕಾರಿನಲ್ಲಿ ಬರುತ್ತಿದ್ದ ಆರೋಪಿ ಚಿನ್ನಾಭರಣ ಮಳಿಗೆಯಿಂದ 2-3 ಕಿಮೀ ದೂರದಲ್ಲಿ ಕಾರು ನಿಲ್ಲಿಸುತ್ತಿದ್ದ. ಹೆಲ್ಮೆಟ್, ಜಾಕೆಟ್, ಕೈ ಗ್ಲೌಸುಗಳನ್ನು ತೊಟ್ಟು ತಮ್ಮನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ. ಮಳಿಗೆಯಿಂದ ಸ್ವಲ್ಪ ದೂರದಲ್ಲಿ ಬೈಕ್ ನಿಲುಗಡೆ ಮಾಡಿ ಆರೋಪಿಗಳು ಮಾರಾಕಾಸ್ತ್ರಗಳೊಂದಿಗೆ ಮಳಿಗೆಗೆ ನುಗ್ಗುತ್ತಿದ್ದರು. ಮಳಿಗೆ ಸಿಬ್ಬಂದಿಗೆ ಹೆದರಿಸಿ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಕ್ಷಣ ಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗುತ್ತಿದ್ದರು.
ಆರೋಪಿಗಳು ಕೃತ್ಯ ಎಸಗುವ ಸಂದರ್ಭದಲ್ಲಿ ಮೊಬೈಲ್ ಫೋನುಗಳನ್ನು ಬಳಸುತ್ತಿರಲಿಲ್ಲ. ರಾಜಾಜಿನಗರದಲ್ಲಿ ಎರಡನೇ ಬಾರಿ ದರೋಡೆಗೆ ವಿಫಲ ಯತ್ನ ನಡೆಸಿದಾಗ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿಯಗಳಲ್ಲಿ ಸೆರೆಯಾಗಿತ್ತು.
ಇದರ ಜಾಡು ಹಿಡಿದು ಹೋಗಾದ ಆರೋಪಿಗಳು ವಿಮಾನ ನಿಲ್ದಾಣದ ಕಡೆ ತೆರಳುತ್ತಿರುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ಚಿಕ್ಕಬಳ್ಳಾಪುರದಲ್ಲಿ ಕೃತ್ಯ ಎಸಗಿದ ವೇಳೆಯೂ ಆರೋಪಿಗಳು ನಂದಿ ಬೆಟ್ಟದ ಕಡೆ ಹೋಗಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಇದರ ಆಧಾರದ ಮೇಲೆ ಇತ್ತೀಚೆಗೆ ವಾಹನಗಳನ್ನು ಬಾಡಿಗೆ ಪಡೆದಿರುವ ವ್ಯಕ್ತಿಗಳ ಬಗ್ಗೆ ಕೂಡ ಮಾಹಿತಿ ಕಲೆಹಾಕಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಆರೋಪಿಗಳು 2011ರಲ್ಲಿ ರಾಮಮೂರ್ತಿ ನಗರದಲ್ಲಿ ಸಂತೋಷ್ ಚಿನ್ನಾಭರಣ ಮಳಿಗೆಯಲ್ಲಿ 900 ಗ್ರಾಂ ಚಿನ್ನವನ್ನು ದೋಚಿಸಿದ್ದರು. ಇದೇ ವರ್ಷದಲ್ಲಿ ಪೀಣ್ಯದಲ್ಲಿರುವ ಚೆಮ್ಮನೂರ್ ಜ್ಯುವೆಲರ್ಸ್ ನಲ್ಲಿ 1.5 ಕೆ.ಜಿ ಚಿನ್ನಾಭರಣಕ್ಕೆ ಕನ್ನ ಹಾಕಿದ್ದರು.
2012ರಲ್ಲಿ ರಾಜಾಜಿನಗರದ 1ನೇ ಬ್ಲಾಕ್ ನಲ್ಲಿರುವ ಚೆಮ್ಮನೂರ್ ಮಳಿಗೆಯಲ್ಲಿ 6 ಕೆ.ಜಿ ಚಿನ್ನಾಭರಣ ದರೋಡೆ ಮಾಡಿದ್ದರು. 2017ರ ಜು.1 ರಂದು ಚಿಕ್ಕಬಳ್ಳಾಪುರದಲ್ಲಿನ ಚೆಮ್ಮನೂರ್ ಜ್ಯುವೆಲರ್ಸ್ ನಲ್ಲಿ 600 ಗ್ರಾಮ ಚಿನ್ನ ದರೋಡೆ ಮಾಡಿದ್ದರು. ಅಲ್ಲದೆ, ಭದ್ರತಾ ಸಿಬ್ಬಂದಿಯ ರೈಫಲ್ ಕಸಿದು ಪರಾರಿಯಾಗಿದ್ದರು. 2018ರ ಫೆ.19 ರಂದು ರಾಜಾಜಿನಗರ ಚೆಮ್ಮನೂರ್ ಜ್ಯುವೆಲರ್ಸ್ ದರೋಡೆ ಯತ್ನ ವಿಫಲವಾಗಿತ್ತು. ಈ ವೇಳೆ ಆರೋಪಿ ಸಾಮ್ರಾಟ್ ಆಕಸ್ಮಿಕವಾಗಿ ಕಾಲಿಗೆ ಪೆಟ್ರೋಲ್ ಬಾಂಬ್ ಹಾಕಿಕೊಂಡಿದ್ದ.
ಆರೋಪಿ ಸಾಮ್ರಾಟ್ ಬಳಿ 50 ಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್, ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾ ಸಿಡಿ ಪತ್ತೆಯಾಗಿವೆ. ಇಲೆಲ್ಲವೂ ಕೂಡ ಪೊಲೀಸ್ ತನಿಖೆ ಆಧಾರಿತ ಸಿಡಿಗಳಾಗಿವೆ ಎಂದು ತಿಳಿದುಬಂದಿದೆ.
ದರೋಡೆ ಮಾಡುವುದು ಹೇಗೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಆರೋಪಿ ಈ ಸಿನಿಮಾದ ಮೂಲಕ ತಿಳಿಯುತ್ತಿದ್ದ ಎಂಡು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಭಾರತೀಯ ಪೊಲೀಸರ ಕೈಗೆ ಸಿಕ್ಕಿದರೆ ಹೇಗೆ ಕೃತ್ಯದ ಬಾಯಿ ಬಿಡುಸುತ್ತಾರೆ ಎಂಬುದನ್ನೂ ಆರೋಪಿ ಸಿನಿಮಾದಲ್ಲಿ ನೋಡಿದ್ದನು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics