ರಾಜ್ಯ

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ; ಹೊಸ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಸಿಐಡಿ

Manjula VN
ಬೆಂಗಳೂರು: ಸಾಫ್ಟ್'ವೇರ್ ಇಂಜಿನಿಯರ್ ಕುಮಾರ್ ಅಜಿತಾಭ್ ನಾಪತ್ತೆಯಾಗಿ ಹಲವು ತಿಂಗಳು ಕಳೆದರೂ ಈ ವರೆಗೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯಿಂದಲೂ ಯಾವುದೇ ಬೆಳೆವಣಿಗೆಗಳು ಕಂಡು ಬಂದಿಲ್ಲ. ಇದೀಗ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಹೊಸ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. 
ಅಜಿತಾಭ್ ಅವರು ಒಎಲ್ಎಕ್ಸ್ ನಲ್ಲಿ ತಮ್ಮ ಕಾರನ್ನು ಮಾರಾಟಕ್ಕಿಟ್ಟಿದ್ದರು. ಇದರಂತೆ 2017ರ ಡಿ.18ರಂದು ಅಜಿತಾಭ್ ಅವರ ಮೊಬೈಲ್ ಫೋನ್ ಗೆ ಕರೆಯೊಂದು ಬಂದಿದೆ. ಈ ವೇಳೆ ಕಾರನ್ನು ತೆಗೆದುಕೊಂಡು ಹೋಗಿದ್ದ ಟೆಕ್ಕಿ ಮತ್ತೆ ಹಿಂತಿರುಗಿ ಬಂದಿರಲಿಲ್ಲ. ಅಂದಿನಿಂದ ನಾಪತ್ತೆಯಾಗಿರುವ ಅಜಿತಾಭ್ ಅವರ ಬಗ್ಗೆ ಈ ವರೆಗೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. 
ಪ್ರಕರಣವನ್ನು ವೈಟ್ ಫೀಲ್ಡ್ ಪೊಲೀಸರು ದಾಖಲಿಸಿಕೊಂಡಿದ್ದು, ಹೈಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಎಸ್ಐಟಿ ತನಿಖೆ ಬಳಿಕವೂ ಯಾವುದೇ ರೀತಿಯ ಸುಳಿವುಗಳು ದೊರಕಿರಲಿಲ್ಲ. ಹೀಗಾಗಿ ಮಾರ್ಚ್.14ರಂದು ಸಿಐಡಿ ತನಿಖೆಗೆ ಹಸ್ತಾಂತರ ಮಾಡಿತ್ತು. 
ಇದೀಗ ಪ್ರಕರಣ ತನಿಖೆಯನ್ನು ಆರಂಭಿಸಿರುವ ಸಿಐಡಿ ಅಧಿಕಾರಿಗಳು, ಈವರೆಗೂ ಎಸ್ಐಟಿ ಕಲೆ ಹಾಕಿರುವ ದಾಖಲೆಗಳನ್ನು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ನಡೆಸುತ್ತಿದ್ದು, ಹೊಸ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದೆ. 
ಅಜಿತಾಭ್ ಅವರನ್ನು ಪತ್ತೆ ಮಾಡಲು ಹೊಸ ಆಯಾಮದಲ್ಲಿ ಸಿಐಡಿ ತನಿಖೆಯನ್ನು ಆರಂಭಿಸಿದೆ. ಅಜಿತಾಭ್ ಪತ್ತೆಗೆ ಯಾರೊಬ್ಬರೂ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿಲ್ಲ. ಪ್ರಕರಣವನ್ನು ಆಳವಾಗಿ ಪರಿಶೀಲನೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎಸ್ಐಟಿ ಯಾವ ಆಯಾಮದಲ್ಲಿ ತನಿಖೆ ನಡೆಸಿಲ್ಲ ಎಂಬುದನ್ನು ಪತ್ತೆ ಹಚ್ಚಿ ಆ ದಿಕ್ಕಿನಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಈಗಾಗಲೇ ನಾವು ಕಾರ್ಯವನ್ನು ಆರಂಭಿಸಿದ್ದಾರೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡುವ ವಿಶ್ವಾಸದಲ್ಲಿದ್ದೇವೆಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT