ಮಂಡ್ಯದಲ್ಲಿ ಬಿರುಸಿನ ಮಳೆ,:50 ಪ್ರಯಾಣಿಕರಿದ್ದ ಬಸ್ ಮೇಲೆ ಉರುಳಿದ ವಿದ್ಯುತ್ ಕಂಬ
ಮಂಡ್ಯ: ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಚಲಿಸುತ್ತಿದ್ದ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಕೋಣನಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು ಬಸ್ ನಲ್ಲಿ ಸುಮಾರು 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕಂಬ ಬಿದ್ದೊಡನೆ ಬಸ್ ನ ಮುಂಭಾಗದಲ್ಲಿದ್ದ ಪ್ರಯಾಣಿಕರೆಲ್ಲ ಭಯಗೊಂಡು ಕಿರುಚಿಕೊಂಡಿದ್ದಾರೆ. ಆದರೆ ಅದೇ ಸಮಯಕ್ಕೆ ವಿದ್ಯುತ್ ಸಂಪರ್ಕವೂ ಕಡಿತಗೊಂಡ ಕಾರಣ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಹೊಳಲು ಮಂಡ್ಯ ಮಾರ್ಗದಲ್ಲಿ ಕೇವಲ ಹದಿನೈದು ದಿನಗಳ ಹಿಂದಷ್ಟೇ ನೂತನವಾಗಿ ಕಂಬಗಳನ್ನು ನೆಡಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಆ ಕಂಬಗಳು ನೆಲಕ್ಕುರುಳಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.