ರಾಜ್ಯ

ಮಂಡ್ಯ: ಹಸೆಮಣೆ ಏರುವ ಮುನ್ನ ಪದವಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ!

Raghavendra Adiga
ಮಂಡ್ಯ: ಮದುವೆ ದಿನವೆಂದರೆ ಹುಡುಗಿಯರಿಗೆ ಏನೋ ಸಂಭ್ರಮ, ಅಲಂಕಾರಗಳನ್ನು ಮಾಡಿಕೊಂಡು ಹಸೆಮಣೆ ಏರುವಾಗ ಏನೋ ಭಯ, ಪುಳಕಗಳು ಇರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಧು ಮದುವೆ ದಿನ ಮದುವೆಗಾಗಿ ತೊಟ್ಟ ಧಿಇರಿಸಿನಲ್ಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಲ್ಲದೆ ಬಿಕಾಂ ಪರೀಕ್ಷೆ ಬರೆದಿದ್ದಾಳೆ!
ಮಂಡ್ಯದ ಕೆಆರ್ ಪೇಟೆಯಲ್ಲಿ ಈ ಘಟನೆ ನಡೆದಿದ್ದು ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದ ಕಾವ್ಯಾಗೆ ಇಂದು ಲೋಹಿತ್ ಜತೆಯಲ್ಲಿ ಮದುವೆ ನಿಶ್ಚಯವಾಗಿತ್ತು. 11 ಗಂಟೆಯಿಂದ  11:45 ಮದುವೆ ಮಹೂರ್ತವಿತ್ತು. ಇದೇ ವೇಳೆ ದ್ವಿತೀಯ ಬಿಕಾಂನ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಸಹ ಇತ್ತು.
ಮದುವೆಯ ಕಾರಣ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ ವಧು ಕಾವ್ಯಾ  ಮದುವೆಗೆಂದು ಸಿದ್ದವಾಗಿದ್ದ ಅಲಂಕಾರದಲ್ಲಿಯೇ ಪರೀಕ್ಷೆಗೆ ಹಾಜರಾಗಿದ್ದಾರೆ. ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದ ಕಾವ್ಯಾ ಮಹೂರ್ತದ ಸಮಯಕ್ಕೆ ಸರಿಯಾಗಿ ವಿವಾಹ ನಡೆಯುವ ಸಭಾ ಭವನಕ್ಕೆ ಮರಳಿದ್ದಾರೆ.
ಬೆಳಗ್ಗೆ 9.15 ರಿಂದ 12.30 ರ ತನಕ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆ ಬರೆದು ಬಂದ ವಧುವನ್ನು ನೇರವಾಗಿ ಮದುವೆ ಮಂಟಪಕ್ಕೆ ಕರೆತಂದು ಸಂಪ್ರದಾಯ ಬದ್ಧವಾಗಿ ವಿವಾಹ ನೆರವೇರಿಸಲಾಗಿದೆ.
ಕಾವ್ಯ ಈ ಹಿಂದಿನ ಮೂರು ಸೆಮಿಸ್ಟರ್​ಗಳಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದರು. ವಿವಾಹದ ಕಾರಣ ಅವರ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂದು ಪೋಷಕರು ಹಾಗೂ ವರನ ಕಡೆಯವರು ಅವರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಮದುವೆ ದಿನ ಸಹ ಹೆಣ್ಣು ಮಗಳೊಬ್ಬಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದ ಎರಡೂ ಕುಟುಂಬದವರ ನಿರ್ಧಾರ ಎಲ್ಲರೂ ಮೆಚ್ಚುವಂತಹುದಾಗಿದೆ.
SCROLL FOR NEXT