ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ರಸ್ತೆಗಳಿಗೆ ನೀರು ನೂಗಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ಸಂಜೆ ಕೃಷ್ಣರಾಜಪುರ, ಹಲಸೂರು, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಗಾಂಧಿನಗರ, ಮಲ್ಲೇಶ್ವರಂ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಯಶವಂತಪುರ, ರಾಜಾಜಿನಗರ, ವಿಜಯನಗರ ಸೇರಿದಂತೆ ಗುಡುಗು ಸಹಿತ ಮಳೆಯಾಗಿದೆ.
ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳಲು ಆಗಮಿಸಿದ್ದ ಹಲವು ಪ್ರಯಾಣಕರು ಪರದಾಡುವಂತಾಗಿದೆ. ಆಕಾಲಿಕ ಮಳೆಯಿಂದ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಲಕ್ಷದೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೋಡಗಳ ಸಾಲು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.