ಬೆಂಗಳೂರು: ರಾಜ್ಯ ವಿಧಾನಸಭೆಗೆ ಮತದಾನ ಆರಂಭವಾಗಿದ್ದು, ಒಟ್ಟು 222 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದೆ.
ಕರ್ನಾಟಕದಲ್ಲಿ ಒಟ್ಟು 5,06,90,538 ಮತದಾರರಿದ್ದು, ಈ ಪೈಕಿ 2,56,75,579 ಪುರುಷ, 5,50,09,904 ಮಹಿಳಾ ಮತ್ತು 5,050 ತೃತೀಯ ಲಿಂಗಿ ಮತದಾರರರಿದ್ದಾರೆ. 222 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆಯ ಮತದನಾ ನಡೆಯುತ್ತಿದೆ. ಇನ್ನು ರಾಜ್ಯ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದ್ದು ಇಲ್ಲಿ ಒಟ್ಟು 6.03 ಲಕ್ಷ ಮತದಾರರಿದ್ದಾರೆ. ಇನ್ನು ಅತ್ಯಂತ ಕಡಿಮೆ ಮತದಾರರ ಕ್ಷೇತ್ರವೆಂದರೆ ಚಿಕ್ಕಮಗಳೂರಾಗಿದ್ದು, ಇಲ್ಲಿ ಒಟ್ಟು 1.66 ಲಕ್ಷ ಮತದಾರರಿದ್ದಾರೆ.
ಹಾಲಿ ಚುನಾವಣೆಯ ವಿಶೇಷವೆಂದರೆ, 15.72 ಲಕ್ಷ ಯುವ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 222 ಕ್ಷೇತ್ರಗಳಿಗೆ ಒಟ್ಟು 58,546 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಈ ಪೈಕಿ 12,002 ಸೂಕ್ಷ್ಮ ಮತಗಟ್ಟೆಗಳಾಗಿವೆ. ಇನ್ನು ರಾಜ್ಯದ ಹಿರಿಯ ಮತದಾರರೆಂದರೆ 111 ವರ್ಷದ ಸಿದ್ಧಗಂಗಾ ಶ್ರೀಗಳು.
222 ಕ್ಷೇತ್ರಗಳಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2,655 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಒಬ್ಬ ಅಭ್ಯರ್ಥಿಯ ಚುನಾವಣೆ ವೆಚ್ಚ 24 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದ್ದು. ಈ ಬಗ್ಗೆ ನಿಗಾ ಇಡಲು ವಿಶೇಷ ತಂಡವನ್ನು ಕೂಡ ಆಯೋಗ ರಚನೆ ಮಾಡಿತ್ತು.
ಹಾಲಿ ಚುನಾವಣೆಗಾಗಿ ಚುನಾವಣಾ ಆಯೋಗ ಒಟ್ಟು 80,109 ವಿ.ವಿ.ಪ್ಯಾಟ್, 75,183 ಕಂಟ್ರೋಲ್ ಯೂನಿಟ್ ಹಾಗೂ 80,819 ಬ್ಯಾಲೆಟ್ ಯೂನಿಟ್ಗಳನ್ನು ಬಳಸಲಾಗುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿ, ಮಹಿಳಾ ಪೊಲೀಸ್ ಇರುವ 600 ಪಿಂಕ್ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಭದ್ರತೆಗಾಗಿ ಕ್ಷಿಪ್ರಕಾರ್ಯ ಪಡೆ, ಅರೆಸೇನಾ ಪಡೆ ಮತ್ತು ಪೊಲೀಸರು ಸೇರಿ 1.4 ಲಕ್ಷ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಜ್ಯದ ಹೊರಗಡೆ ಸೇನೆಯಲ್ಲಿರುವ 27,988 ಸೇವಾ ಮತದಾರರು ಮತದಾನ ಹಕ್ಕು ಹೊಂದಿದ್ದಾರೆ. ಈ ಪೈಕಿ 14,302 ಮತದಾರರು ಬೆಳಗಾವಿ ಜಿಲ್ಲೆಗೆ ಸೇರಿರುವುದು ವಿಶೇಷವಾಗಿದೆ.
ಇನ್ನು ಮೇ28 ರಂದು ಸಿದ್ದರಾಮಯ್ಯ ಸರ್ಕಾರದ ಅವಧಿ ಮುಕ್ತಾಯ. ಬಳಿಕ ನೂತನ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics