ರಾಜ್ಯ

ಮಂಗಳೂರು: ಕರಾವಳಿ ಪಡೆಗೆ ಐಸಿಜಿಎಸ್ ವಿಕ್ರಮ್ ನೌಕೆ ಸೇರ್ಪಡೆ

Srinivasamurthy VN
ಮಂಗಳೂರು: ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಐಸಿಜಿಎಸ್‌ ವಿಕ್ರಮ್‌ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆಯನ್ನು ಸೇರ್ಪಡೆಗೊಳಿಸಲಾಯಿತು. 
ಚೆನ್ನೈನ ಡಾಕ್ ಯಾರ್ಡ್ ನಲ್ಲಿ ಮೆಸರ್ಸ್‌ ಲಾರ್ಸನ್‌ ಆ್ಯಂಡ್‌ ಟರ್ಬೊ ಲಿ. ಸಂಸ್ಥೆ ನಿರ್ಮಿಸಿದ ಐಸಿಜಿಎಸ್ ವಿಕ್ರಮ ನೌಕೆ ಭಾನುವಾರ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ನವ ಮಂಗಳೂರು ಬಂದರಿಗೆ ಆಗಮಿಸಿತು. ಈ ವೇಳೆ ಸ್ಥಳೀಯ  ಶಾಸಕ ಬಿ.ಎ. ಮೊಯ್ದಿನ್‌ ಬಾವ ಸೇರಿದಂತೆ ನೌಕಾಪಡಿಯ ಹಿರಿಯ ಅಧಿಕಾರಿಗಳು ನೌಕೆಯನ್ನು ಬರಮಾಡಿಕೊಂಡರು. 
ಐಸಿಜಿಎಸ್‌ ವಿಕ್ರಮ್‌ ಅತ್ಯಾಧುನಿಕ ಸೆನ್ಸಾರ್‌, ಯಂತ್ರೋಪಕರಣಗಳು, ತಂತ್ರಜ್ಞಾನ, ದಿಕ್ಸೂಚಿ ಮತ್ತು ಸಂವಹನ ಸಾಧನಗಳನ್ನು ಒಳಗೊಂಡ ನೌಕೆಯಾಗಿದೆ. ನೌಕೆಯಲ್ಲಿ 300 ಎಂಎಂ ಗನ್‌, ಅಗ್ನಿ ನಿಯಂತ್ರಣ ವ್ಯವಸ್ಥೆ ಸಹಿತ 12.7 ಎಂಎಂ ಗನ್‌ ಅಳವಡಿಸಲಾಗಿದೆ. ಸಮಗ್ರ ಬ್ರಿಡ್ಜ್‌ ವ್ಯವಸ್ಥೆ, ಸ್ವಯಂಚಾಲಿತ ವಿದ್ಯುತ್‌ ಶಕ್ತಿ ನಿರ್ವಹಣಾ ವ್ಯವಸ್ಥೆ, ಹೈ ಪವರ್‌ ಬಾಹ್ಯ ಅಗ್ನಿ ಶಾಮಕ ವ್ಯವಸ್ಥೆಗಳಿವೆ. 
ಇನ್ನು ನೌಕೆಯಲ್ಲಿ ಅವಳಿ ಎಂಜಿನ್‌ ಹೆಲಿಕಾಪ್ಟರ್‌ ಹೊತ್ತೊಯ್ಯುವ ಮತ್ತು ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಾಲ್ಕು ಹೈಸ್ಪೀಡ್‌ ಬೋಟ್‌ಗಳು, ತುರ್ತು ಕಾರ್ಯಾಚರಣೆಯ ಎರಡು ಪುಟ್ಟ ಬೋಟ್‌ಗಳು, ಹುಡುಕಾಟ ಮತ್ತು ರಕ್ಷಣಾ ಕಾರ್ಯದ ಸಲಕರಣೆಗಳು, ಗಸ್ತು ಸೌಲಭ್ಯಗಳು, ಸಮುದ್ರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳಿವೆ. ಭೂಮಿಯ ಯಾವುದೇ ಅವಲಂಬನೆ ಇಲ್ಲದೆ 20 ದಿನಗಳ ಕಾಲ ಸಮುದ್ರದಲ್ಲಿ ಇರುವಷ್ಟು ಶಕ್ತವಾಗಿರುವ ವಿಕ್ರಮ್‌, 2100 ಟನ್‌ ತೂಕ ಹೊಂದಿದೆ. ಅಂತೆಯೇ ನೌಕೆಯಲ್ಲಿ 9100 ಕಿವ್ಯಾಟ್‌ನ ಎರಡು ಎಂಜಿನ್‌ಗಳಿದ್ದು, ನೌಕೆಯು ಎನ್‌ಎಂಪಿಟಿಯಿಂದ ಕಾರ್ಯಾಚರಣೆ ನಡೆಸಲಿದೆ. ಇನ್ನು 
ನೌಕೆಯಲ್ಲಿ ಒಟ್ಟು 14 ಅಧಿಕಾರಿಗಳು ಮತ್ತು 88 ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ನೌಕೆಯ ಸ್ವಾಗತ ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ನರೋತ್ತಮ್‌ ಮಿಶ್ರಾ, ಎನ್‌ಎಂಪಿಟಿ ಪ್ರಭಾರ ಅಧ್ಯಕ್ಷ ಸುರೇಶ್‌ ಶಿರ್ವಾಡ್ಕರ್‌, ಕೋಸ್ಟ್‌ ಗಾರ್ಡ್‌ ಪ್ರಭಾರ ಕಮಾಂಡೆಂಟ್‌ ಸತ್ವಂತ್‌ ಸಿಂಗ್‌, ಕಮಾಂಡೆಂಟ್‌ ಗುಲ್ವಿಂದರ್‌ ಸಿಂಗ್‌, ಐಸಿಜಿಎಸ್‌ ವಿಕ್ರಮ್‌ನ ಕಮಾಂಡೆಂಟ್‌ ರಾಜ್‌ಕಮಲ್‌ ಸಿನ್ಹಾ ಉಪಸ್ಥಿತರಿದ್ದರು.
SCROLL FOR NEXT