ರಾಜ್ಯ

ಕೇಂದ್ರದ ಕಾವೇರಿ ಸ್ಕೀಂಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತೀವ್ರ ವಿರೋಧ

Manjula VN
ವಿಜಯವಾಡ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 
ಕಾವೇರಿ ವಿವಾದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ತಮಿಳುನಾಡು ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆಧರೆ, ಇಂದು ಬಿಜೆಪಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕರಡು ರೂಪಿಸುತ್ತಿದೆ ಎಂದು ಹೇಳಿದ್ದಾರೆ. 
ರಾಜ್ಯಕ್ಕಿದು ಕರಾಳ ದಿನವಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕರ್ನಾಟಕದ ವಿರುದ್ಧ ಕೇಂದ್ರ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂದಿಗೂ ತಿಳಿದಿರಲಿಲ್ಲ. ಕೇಂದ್ರ ನಿರ್ಧಾರದ ಪರವಾಗಿ ಕರ್ನಾಟಕದ ನಾಲ್ವರು ಸಚಿವರು ನಿಂತಿದ್ದಾರೆ. ಮೊದಲು ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿದೆ ಎಂದು ಕಿಡಿಕಾರಿದ್ದಾರೆ. 
ಒಂದು ವೇಳೆ ರಾಜೀನಾಮೆ ನೀಡದೇ ಹೋದರೆ, ಕೇಂದ್ರ ಸರ್ಕಾರದ ವಿರುದ್ಧ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಅವರು ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ಕರಡಿನಲ್ಲಿ ನ್ಯಾಯಮಂಡಳಿಯ ಆದೇಶಗಳನ್ನು ಮಾತ್ರ ಉಲ್ಲೇಖ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ಕರ್ನಾಟಕ ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕದ ವಿರೋಧ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸುತ್ತದೆಯೇ ಎಂಬುದರ ಕುರಿತು ಕಾದು ನೋಡಬೇಕಿದೆ. ಕಾವೇರಿ ಕುರಿತ ನಿರ್ಧಾರ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ನಡುವೆ ಇದೆ. ಕರಡು ರಚನೆಗೂ ಮುನ್ನ ರಾಜ್ಯವನ್ನು ಸಂಪರ್ಕಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ. 
SCROLL FOR NEXT