ಬೆಂಗಳೂರು: ಖಾಸಗಿ ಶಾಲೆಗಳು ದೊಡ್ಡ ಮೊತ್ತದ ದೇಣಿಗೆ ಹಾಗೂ ಶುಲ್ಕಗಳನ್ನು ಸಂಗ್ರಹಿಸುವುದನ್ನು ತಡೆಯುವ ಸಲುವಾಗಿ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೂತನ ಅಧಿಸೂಚನೆಯೊಂದನ್ನು ಜಾರಿಗೊಳಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅಧಿಸೂಚನೆ ಜಾರಿಯಾಗಲಿದೆ. ರಾಜ್ಯದಲ್ಲಿನ ಎಲ್ಲಾ ಶಾಲೆಗಳಿಗೆ ಶುಲ್ಕ ನಿಯಂತ್ರಣ ನಿಯಮಾವಳಿಗಳು ಅನ್ವಯಿಸುತ್ತದೆ.ಮಂಡಳಿಯಡಿಯಲ್ಲದೆ ಸಿಬಿಎಸ್ಇ, ಐಸಿಎಸ್ಇ ಶಾಲೆಗಳಿಗೆ ಸಹ ಈ ನಿಯಮ ಅನ್ವಯವಾಗಲಿದೆ.
ಗೆಝೆಟ್ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ನಡೆಯುವ ಶಾಲೆಯೊಂದು ವಾರ್ಷಿಕವಾಗಿ ಶೇ. 15ಕ್ಕಿಂತ ಹೆಚ್ಚಿನ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಸಿಬ್ಬಂದಿ ಸಂಬಳ ಸೇರಿದಂತೆ ಒಟ್ಟಾರೆ ಖರ್ಚಿನ ಆಧಾರದ ಮೇಲೆ ಶುಲ್ಕ ರಚನೆ ಆಗಬೇಕು. ಶಾಲೆಗಳಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಾಲೆಯ ಒಟ್ಟಾರೆ ಖರ್ಚು ನಿರ್ಧಾರವಾಗಬೇಕು.
ಶಾಲೆಗಳು ತಮ್ಮ ಶುಲ್ಕ ರಚನೆ ಹಾಗೂ ಇತರೆ ವಿವರಗಳನ್ನು ತಮ್ಮ ವೆಬ್ ಸೈಟ್ ಹಾಗೂ ಶಾಲಾ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು.
ಶಾಲಾ ಪ್ರವೇಶದ ವೇಳೆ ಶಾಲೆಗಳು ವಿಧಿಸುವ ನಿರ್ವಹಣೆ ಶುಲ್ಕಗಳ ನಿಯಂತ್ರಣ ಸಹ ಇದರಲ್ಲಿ ಸೇರಿದೆ. ಹೊಸ ಅಧಿಸೂಚನೆ ಪ್ರಕಾರ ಶಾಲೆಗಳು ಕೇವಲ 2,500 ರೂಪಾಯಿಗಳನ್ನು ಶಾಲಾ ನಿರ್ವಹಣೆ ಶುಲ್ಕವಾಗಿ ವಿಧಿಸಲು ಅವಕಾಶವಿದೆ.