ರಾಜ್ಯ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಗ್ರಾಹಕನಿಗೆ 'ರೆಡ್ ಇಂಕ್' ಪ್ರಶಸ್ತಿ

Sumana Upadhyaya

ಬೆಂಗಳೂರು: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಬೆಂಗಳೂರು ಕಚೇರಿಯ ಪ್ರಧಾನ ಛಾಯಾಗ್ರಾಹಕ ವಿನೋದ್ ಕುಮಾರ್ ಟಿ ಅವರಿಗೆ ಮುಂಬೈ ಪ್ರೆಸ್ ಕ್ಲಬ್ ರೆಡ್ ಇಂಕ್ ಪ್ರಶಸ್ತಿ ನೀಡಿ ಗೌರವಿಸಿದೆ. ''ಬಿಗ್ ಪಿಕ್ಚರ್'' ವಿಭಾಗದಲ್ಲಿ 2018ನೇ ಸಾಲಿನಲ್ಲಿ ಪತ್ರಿಕೋದ್ಯಮದಲ್ಲಿ ಅದ್ವಿತೀಯ ಸಾಧನೆ ಗೌರವ ಸಂದಿದೆ.

ವಿನೋದ್ ಅವರು ನಿನ್ನೆ ಮುಂಬೈ ಪ್ರೆಸ್ ಕ್ಲಬ್, ನಾರಿಮನ್ ಪಾಯಿಂಟ್ ನ ಜೆಮ್ ಶೆಡ್ ಬಾಬಾ ಥಿಯೇಟರ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರು ಮೂಲದ 65 ವರ್ಷದ ಕುಷ್ಠರೋಗ ಪೀಡಿತೆ ವೃದ್ಧೆಯೊಬ್ಬರಿಗೆ ಆಧಾರ್ ಕಾರ್ಡು ನೀಡಲು ನಿರಾಕರಿಸಿದ ಕುರಿತ ವರದಿಯಲ್ಲಿ ವಿನೋದ್ ಅವರು ತೆಗೆದ ಛಾಯಾಚಿತ್ರ ಪ್ರಕಟವಾಗಿತ್ತು. ಅದು ಕಳೆದ ವರ್ಷ ಡಿಸೆಂಬರ್ ನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಕುಷ್ಠರೋಗ ಪೀಡಿತರಿಗೆ ಆಧಾರ್ ಸಂಖ್ಯೆ ನೀಡಲು ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಅದರಲ್ಲಿ ವಿನೋದ್ ಅವರು ತೆಗೆದ ಮನಕಲಕುವ ವೃದ್ಧೆಯ ಫೋಟೋಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಪತ್ರಿಕೆಯಲ್ಲಿ ಸರಣಿ ವರದಿಗಳು ಪ್ರಕಟಗೊಂಡ ನಂತರ ಬೆಂಗಳೂರಿನ ಕುಷ್ಠರೋಗ ಆಸ್ಪತ್ರೆ ರೋಗಿಗಳಿಗೆ ಆಧಾರ್ ಕಾರ್ಡುಗಳನ್ನು ವಿತರಿಸುವ ವ್ಯವಸ್ಥೆ ಮಾಡಿತ್ತು.

ಕುಷ್ಠರೋಗಿಗಳಿಗೆ ಆಧಾರ್ ಸಂಖ್ಯೆ ನೀಡಲು ನಿರಾಕರಿಸುತ್ತಿರುವ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ಸುರಕ್ಷಾ ಪಿ ಸರಣಿ ವರದಿಗಳನ್ನು ಬರೆದಿದ್ದರು. ಅವರ ಬಗ್ಗೆ ಇತ್ತೀಚೆಗೆ ಚಮೇಲಿ ದೇವಿ ಜೈನ್ ಪ್ರಶಸ್ತಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

SCROLL FOR NEXT