'ನಟೋರಿಯಸ್ ಬೆಂಗಳೂರು ಟ್ರಾಫಿಕ್ ಜಾಮ್' ಗೆ ಹೈರಾಣಾದ ವಿವಿಐಪಿಗಳು
ಬೆಂಗಳೂರು; ವಿಧಾನಸೌಧ ಮುಂಭಾಗದಲ್ಲಿ ನೂತನ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭ ಹಿನ್ನಲೆಯಲ್ಲಿ ಶಕ್ತಿಸೌಧ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲಕಾಲ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು.
ಸ್ವತಃ ಪ್ರಮಾಣವಚನ ಸ್ವೀಕರಿಸಲು ಹೊರಟಿದ್ದ ಕುಮಾರಸ್ವಾಮಿ, ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಕಾಂಗ್ರೆಸ್ ವರಿಷ್ಠ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು ಸೇರಿದಂದೆ ಹಲವು ವಿವಿಐಪಿಗಳಿಗೂ ಟ್ರಾಫಿಕ್ ಬಿಸಿ ತಟ್ಟಿತ್ತು.
ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಡಾ.ಅಂಬೇಡರ್ ರಸ್ತೆಯಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯ ವ್ಯವಸ್ಥೆ ತಕಲ್ಪಿಸಿದ್ದರು.
ಸಮಾರಂಭಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗವಿಸಿದ್ದರು.
ಮಧ್ಯಾಹ್ನ 2 ಗಂಟೆಯಿಂದಲೂ ಕಾರ್ಯಕರ್ತರು ವಿಧಾನಸೌಧದತ್ತ ಬರಲು ಆರಂಭಿಸಿದ್ದರು. ಈ ಹೊತ್ತಿಗಾಗಲೇ ಮಳೆ ಆರಂಭವಾಗಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಕುಮಾರಸ್ವಾಮಿಯವರು ಜೆ.ಪಿ.ನಗರದ ತಮ್ಮ ನಿವಾಸದಿಂದ ವಿಧಾನಸೌಧದತ್ತ ಹೊರಟಿದ್ದರು. ಅರಮನೆ ರಸ್ತೆಯಲ್ಲಿ ಬಂದ ಕುಮಾರಸ್ವಾಮಿಯವರ ಕಾರು ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ಬಳಿಯ ಕೆಳ ಸೇತುವೆ ಬಳಿ ವಾಹನ ದಟ್ಟಣೆಯಲ್ಲಿ ಸಿಲುಕಿತ್ತು. ಚಾಲುಕ್ಯ ವೃತ್ತದಿಂದ ಕೆಳ ಸೇತುವೆ ತನಕ ವಾಹನ ದಟ್ಟಣೆ ಇದ್ದ ಕಾರಣ ಅವರ ಕಾರು ಸುಮಾರು 4 ನಿಮಿ|ಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕಿತ್ತು. ಕೂಡಲೇ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟರು.
ಇನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿದ್ದ ಕಾರು ಬಂದಾಗಲೂ ಚಾಲುಕ್ಯ ವೃತ್ತದಲ್ಲಿ ವಾಹನ ದಟ್ಟಣೆ ಇತ್ತು. ಕೂಡಲೇ ಪೊಲೀಸರು ಇತರೆ ವಾಹನಗಳನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಟ್ಟರು.
ಇದಾದ ಬಳಿಕವೂ ಸಂಚಾರ ದಟ್ಟಣೆ ಮುಂದುವರೆದಿತ್ತು. ಇನ್ನು ಸಮಾರಂಭ ಮುಗಿದ ಬಳಿಕ ಜನತೆ ತಮ್ಮ ಊರಿನತ್ತ ತೆರಳಲು ಮುಂದಾದದರೂ ಈ ವೇಳೆ ಟ್ರಾಫಿಕ್ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಮಳೆಯಲ್ಲಿಯೇ ನಿತು ಸಂಚಾರ ನಿಯಂತ್ರಣವನ್ನು ಹತೋಟಿಗೆ ತರಲು ಹರಸಾಹಸಪಟ್ಟರು.
ಒಬ್ಬೊಬ್ಬ ಅಧಿಕಾರಿಯ ಹಿಂದೆಯೂ 18-20 ಬೆಂಗಾವಲು ವಾಹನಗಳು ಬರುತ್ತಿದ್ದವು. ಅವರನ್ನು ನಿಭಾಯಿಸುವು ಭಾರೀ ಕಷ್ಟವಾಗುತ್ತಿತ್ತು. ರಾಜ್ಯಪಾಲರು ಹಾಗೂ ನೂತನ ಮುಖ್ಯಮಂತ್ರಿಗಳಿಗೆ ಬಿಟ್ಟರೆ ಬೇರಾರಿಗೂ ಶೂನ್ಯ ಟ್ರಾಫಿಕ್ ನೀಡಲು ಸಾಧ್ಯವಿಲ್ಲ. ಪ್ರತೀಯೊಬ್ಬ ಅಧಿಕಾರಿಯ ಹಿಂದೆಯೂ ಹಲವಾರು ಬೆಂಗಾವಲು ವಾಹನಗಳು ಬರುತ್ತಿದ್ದ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲು ಪೊಲೀಸರಿಗೆ ಕಷ್ಟವಾಗುತ್ತಿತ್ತು. ಸಾಕಷ್ಟು ಬೆಂಗಾವಲು ವಾಹನಗಳು ಮುಂದಕ್ಕೆ ಸಾಗಲು ಸಾಧ್ಯವಾಗದೆ ವಾಹನಗಳ ಮಧ್ಯೆಯೇ ಸಿಲುಕಿಕೊಂಡಿದ್ದವು. ಎಲ್ಲವೂ ಅನಿರೀಕ್ಷಿತವಾಗಿ ನಡೆದಿದ್ದರಿಂದ ನಿಭಾಯಿಸುವುದು ಕಷ್ಟವಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿವಿಐಪಿಗಳ ಸ್ಥಿತಿಯೇ ಹೀಗಿರುವುಗ ಇನ್ನು ಸಾಮಾನ್ಯ ವಾಹನ ಸವಾರರ ಪಾಡಂತೂ ಹೇಳತೀರದಂತಾಗಿತ್ತು. ಪ್ರಮುಖವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಳ್ಳಾರಿ ರಸ್ತೆ), ಹಳೇ ವಿಮಾನ ನಿಲ್ದಾಣ ರಸ್ತೆದಲ್ಲಂತೂ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos