ರಾಜ್ಯ

ಸಾಲ ಮನ್ನಾ: ಇಂದು ರೈತ ಸಂಘಟನೆಗಳ ಸಭೆ ಕರೆದ ಸಿಎಂ ಕುಮಾರಸ್ವಾಮಿ

Lingaraj Badiger
ಬೆಂಗಳೂರು: ರೈತರ ಸಾಲ ಮನ್ನಾ, ರೈತರ ಆತ್ಮಹತ್ಯೆ ಹಾಗೂ ರೈತರ ಇತರೆ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಸಭೆ ಕರೆದಿದ್ದಾರೆ. 
ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಭೆ ಕರೆದಿದ್ದು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪಾಲ್ಗೊಳ್ಳಲಿದ್ದು, ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಯಿಂದ ಪ್ರಗತಿಪರ ಕೃಷಿಕರನ್ನು ಈ ಸಭೆಗೆ ಅಹ್ವಾನಿಸಲಾಗಿದೆ. 
ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಚುನಾವಣೆ ವೇಳೆ ಹೇಳಿದ್ದರು. ಆದರೆ ಈಗ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ನೆರವಿನಿಂದ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಿದ್ದಾರೆ. 
ಪ್ರತಿಪಕ್ಷ ಬಿಜೆಪಿ ಮತ್ತು ರೈತ ಸಂಘಟನೆಗಳು ಸಾಲಮನ್ನಾ ಮಾಡುವಂತೆ ಸಿಎಂ ಮೇಲೆ  ಒತ್ತಡ ಹೇರುತ್ತಿವೆ. ಇವೆಲ್ಲವುಗಳ ನಡುವೆ ಕಾಂಗ್ರೆಸ್ ಪಕ್ಷವನ್ನು ಒಪ್ಪಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ತೀರ್ಮಾನ ಮಾಡುವರೆ ಎಂಬುದು ಈಗ ಕುತೂಹಲ ಮೂಡಿಸಿದೆ.
SCROLL FOR NEXT