ರಾಜ್ಯ

ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ನಾಡೋಜ ಪ್ರಶಸ್ತಿ ಪ್ರಧಾನ

Shilpa D
ಮೈಸೂರು: ಪ್ರತಿಭಾವಂತ ಸಂಗೀತಗಾರರನ್ನು ವಿಶ್ವ ವಿದ್ಯಾನಿಲಯಗಳು ಹುಟ್ಟು ಹಾಕುವಲ್ಲಿ ವಿಫಲವಾಗಿವೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‌ ವಾದಕ ಡಾ.ಪಂಡಿತ್‌ ರಾಜೀವ್‌ ತಾರಾನಾಥ್‌ ಬೇಸರ ವ್ಯಕ್ತ ಪಡಿಸಿದ್ದಾರೆ. 
ಸರಸ್ವತಿಪುರಂನ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಎಸ್‌. ಘಂಟಿ ಅವರಿಂದ ನಾಡೋಜ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಂಪಿ ವಿಶ್ವವಿದ್ಯಾನಿಲಯದಿಂದ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ನಮ್ಮ ಊರಿನ ಮಂದಿ ಹಾರ ಹಾಕಿ, ವಿಗ್ರಹ ಕೊಟ್ಟು ಗೌರವಿಸಿರುವುದರಿಂದ ಹೆಚ್ಚು ಖುಷಿಯಾಗುತ್ತಿದೆ. ನಾನು ಇನ್ನೂ ಕೆಲವು ದಿನ ಬದುಕಿರುತ್ತೇನೆ. ಅಷ್ಟರ ಒಳಗೆ ಈ ಪ್ರಶಸ್ತಿಯಂತೆ ನಿಮ್ಮ ವಿವಿಯಿಂದ ನಾಡಿಗೆ ಒಬ್ಬ ಸಂಗೀತಗಾರರನ್ನು ಕೊಡಿ ಆಗ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು. 
ವಿಶ್ವವಿದ್ಯಾನಿಲಯಗಳ ಸಂಗೀತ ವಿಭಾಗಗಳಿಂದ ಸಂಗೀತಗಾರರೆ ಬರುತ್ತಿಲ್ಲ. ವಿವಿಯಲ್ಲಿರುವ ಪ್ರಾಧ್ಯಾಪಕರು 2 ಲಕ್ಷ ವೇತನ ಪಡೆಯುತ್ತಿದ್ದಾರೆಯೇ ಹೊರತು ಪ್ರತಿಭಾವಂತರನ್ನು ಹುಟ್ಟುಹಾಕುತ್ತಿಲ್ಲ. ಸಂಗೀತಗಾರ ರವಿಶಂಕರ್‌, ಅಲಿ ಅಕ್ಬರ್‌ ಖಾನ್‌ ಸಾಹೇಬ್‌ ಸೇರಿದಂತೆ ಸಂಗೀತದ ದಿಗ್ಗಜರೆಲ್ಲರ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಪ್ರತಿಭಾವಂತ ಸಂಗೀತಗಾರರನ್ನು ಹುಟ್ಟುಹಾಕುವ ಜವಾಬ್ದಾರಿ ಹೊಂದಿರುವ ವಿಶ್ವವಿದ್ಯಾನಿಲಯಗಳು ಈ ನಿಟ್ಟಿನಲ್ಲಿ ಬದ್ಧತೆ ತೋರಬೇಕಿದೆ,'' ಎಂದರು. 
ನಾನು ಸಂಗೀತಗಾರ. ಸದಾ ನುಡಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ನಮ್ಮಲ್ಲಿ ಸಂಗೀತವನ್ನು ಗುರುಮುಖಿ ವಿಧಾನದಿಂದ ಕಲಿಸುತ್ತೇವೆ. ಆದರೆ, ಇದೀಗ ಆ ಶಿಕ್ಷಣ ಕ್ರಮಕ್ಕೆ ಮಾನ್ಯತೆಯೇ ಇಲ್ಲವಾಗಿದೆ ಎಂದು ಹೇಳಿದ್ದಾರೆ.
SCROLL FOR NEXT