ಮಂಡ್ಯ: ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಭಗ್ನಪ್ರೇಮಿ ಹಾಗೂ ಆತನ ಸ್ನೇಹಿತರಿಂದ ಅಪಹರಣಕ್ಕೊಳಗಾಗಿದ್ದ ಯುವತಿ ಬುದ್ದಿವಂತಿಕೆಯಿಂದ ಪಾರಾಗಿರುವ ಘಟನೆ ಮಂಡ್ಯದ ಮೇಲುಕೋಟೆಯಲ್ಲಿ ನಡೆದಿದೆ.
ಮೇ 28 ರಂದು ನಡೆದಿದ್ದ ಈ ಕಿಡ್ನಾಪ್ ಪ್ರಕರಣ ಸುಖಾಂತ್ಯವಾಗಿದೆ, ಯುವತಿ ಸುರಕ್ಷಿತವಾಗಿ ಮನೆಗೆ ವಾಪಸಾಗಿದ್ದಾಳೆ.
ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯ ಸಿಂಗ್ರಿಗೌಡನ ಪಾಳ್ಯದ 20 ವರ್ಷದ ಯುವತಿಯನ್ನು ಕಾಲೇಜಿಗೆ ತೆರಳುವಾಗ ಅಪಹರಿಸಲಾಗಿತ್ತು, ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಕುಮಾರ ಅಲಿಯಾಸ್ ಕುಡುಕ ತನ್ನ ಸ್ನೇಹಿತ ಪರಮೇಶ್ ಜೊತೆ ಕಿಡ್ನಾಪ್ ಮಾಡಿದ್ದ.
ಅದೇ ಗ್ರಾಮದ ಹರೀಶ್ ಎಂಬಾತ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಬೆಲ್ಲಾಳೆ ವರೆಗೂ ನಡೆದುಕೊಂಡು ತೆರಳುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಕುಮಾರ್ ಮತ್ತು ಪರಮೇಶ್ ಹಾಗೂ ಶಿವಕುಮಾರ್ ಆಕೆಯನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದರು.
ನಂತರ ಕಾರಿನಲ್ಲಿ ಶ್ರೀರಂಗಪಟ್ಟಣದ ರಸ್ತೆ ಕಡೆ ತೆರಳಿದರು. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಯುವತಿ ಜೋರಾಗಿ ಕೂಗಿ ಕೊಂಡಿದ್ದಾಳೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಪೊಲೀಸರನ್ನು ಕರೆ ಮಾಡಿದ್ದಾರೆ, ನಂತರ ಮೂವರು ನೆರೆದಿದ್ದವರ ಬಳಿ ಕ್ಷಮೆ ಕೋರಿ ತಮ್ಮನ್ನು ವಾಪಸ್ ಮನೆಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆಕೆಯನ್ನು ಮನೆಗೆ ಬಿಡುವುದಾಗಿ ತಿಳಿಸಿದ್ದಾರೆ.
ಆದರೆ ದಾರಿ ಮಧ್ಯದಲ್ಲಿ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಅದೃಷ್ಟ ವಶಾತ್ ಯಾರಿಗೂ ಗಾಯಗಳಾಗಿಲ್ಲ, ಅಪಘಾತ ನಡೆದ ಸ್ಥಳಕ್ಕೆ ಜನ ಸೇರುತ್ತಿದ್ದಂತೆ ಸಮಯದ ಸದುಪಯೋಗ ಪಡಿಸಿಕೊಂಡ ಯುವತಿ ಕೆಎಸ್ ಆರ್ ಟಿಸಿ ಬಸ್ ನಿಲ್ಲಿಸಿ ಅದರಲ್ಲಿ ತೆರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ, ತನ್ನ ಪ್ರೇಮವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ. ಈ ಸಂಬಂಧ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.