Will bypoll result ensure stability of government?
ಬೆಂಗಳೂರು: ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಉಪ ಚುನಾವಣೆ ಹಾಗೂ ಜಮಖಂಡಿ ರಾಮನಗರ ವಿಧಾನಸಭಾ ಉಪಚುನಾವಣೆ 2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನುವುದಕ್ಕಿಂತ ಹೆಚ್ಚಾಗಿ ಈ ಉಪಚುನಾವಣೆಗಳು ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಸ್ಥಿರತೆಯನ್ನು ನಿರ್ಧರಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಗೆದ್ದರೆ ಸಮ್ಮಿಶ್ರ ಸರ್ಕಾರ ಮತ್ತಷ್ಟು ಸ್ಥಿರವಾಗುವುದರ ಜೊತೆಗೆ ಶಿವಮೊಗ್ಗದಲ್ಲಿ ಜೆಡಿಎಸ್ ನ ನೆಲೆ ಭದ್ರಗೊಳ್ಳುವುದಕ್ಕೂ ಸಾಧ್ಯವಾಗಲಿದೆ. ಈ ಕಾರಣಕ್ಕಾಗಿಯೆ ಹೆಚ್ ಡಿ ಕುಮಾರಸ್ವಾಮಿ ಸಹ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ಮಾಡಿದ್ದು, ಮಧು ಬಂಗಾರಪ್ಪ ಗೆದ್ದರೆ ಅದು ಯಡಿಯೂರಪ್ಪ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಅವರ ಗೆಲುವಾಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಗೆದ್ದರೆ ಪಕ್ಷದಲ್ಲಿ ಈಗಾಗಲೇ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಮತ್ತಷ್ಟು ಬಲಶಾಲಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗಿಂತಲೂ ಈ ಉಪಚುನಾವಣೆಗಳು ರಾಜ್ಯ ಸರ್ಕಾರದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.