ಬೆಂಗಳೂರು: ದೇಶದಲ್ಲಿ ಎಲೆಕ್ಟಿಕ್ ವಾಹನಗಳ ಭರಾಟೆ ಜೋರಾಗಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕೂಡ ವಿದ್ಯುತ್ ಚಾಲಿತ ವಾಹನಗಳಿಗಾಗಿ ಇ-ಚಾರ್ಜಿಂಗ್ ಪಾಯಿಂಟ್ ಗಳ ಸ್ಥಾಪನೆಗೆ ಮುಂದಾಗಿದೆ.
ಮೂಲಗಳ ಪ್ರಕಾರ ಮೈಸೂರು ಮತ್ತು ಬೆಂಗಳೂರು ಹೆದ್ದಾರಿಯಲ್ಲಿ ವಿದ್ಯುತ್ ಚಾಲಿತ ವೆಹಿಕಲ್‌ನಲ್ಲಿ ಪ್ರಯಾಣಿಸುವವರಿಗಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಪತ್ರಿಕೊಂದು ವರದಿ ಮಾಡಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 107 ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡಲು ಮುಂದಾಗಿದೆ.
'ಬೆಸ್ಕಾಂ ಮತ್ತು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಈ ಕುರಿತು ಕೇಂದ್ರ ಇಂಧನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಂಗೇರಿಯಿಂದ ಆರಂಭಿಸಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯವರೆಗೆ 18 ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜತೆಗೆ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿನ ಎಲೆಕ್ಟ್ರಾನಿಕ್ ಸಿಟಿಯಿಂದ ಅತ್ತಿಬೆಲೆಯವರೆಗೆ 6 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸಿದ್ಧತೆ ನಡೆದಿದೆ.
ಒಟ್ಟಾರೆ 107 ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಸರ್ಕಾರ ಉದ್ದೇಶಿಸಿದ್ದು, ಅದರ ಪೈಕಿ ಬೆಂಗಳೂರು ನಗರದಲ್ಲಿ 83 ಮತ್ತು ಹೆದ್ದಾರಿಗಳಲ್ಲಿ 24 ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲಾಗುತ್ತದೆ. ಅದಕ್ಕಾಗಿ ಸೂಕ್ತ ತಾಣದ ಹುಡುಕಾಟ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಚಾರ್ಜಿಂಗ್ ಸ್ಟೇಶನ್ ನಿರ್ಮಿಸಲಾಗುತ್ತಿದೆ, ಅದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ರಾಂತಿ ಕೊಠಡಿ, ಕೆಫೆಟೇರಿಯಾ ಇತ್ಯಾದಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.