ರಾಜ್ಯ

ರಾಜಕೀಯದಲ್ಲಿ ಧರ್ಮ ಬೆರೆಸುವವರನ್ನು ತಿರಸ್ಕರಿಸಿ- ಜಿ. ಟಿ. ದೇವೇಗೌಡ

Nagaraja AB

ಮೈಸೂರು: ಧರ್ಮ ಮತ್ತು ಜಾತಿ ಆಧಾರದ ಮೇಲೆ ಮತಗಳನ್ನು ಪಡೆಯುವುದು ಹಾಗೂ ಟಿಪ್ಪು ಜಯಂತಿ ಆಚರಣೆಯಲ್ಲಿ ರಾಜಕೀಯ ಪಕ್ಷಗಳ ರಾಜಕಾರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ. ದೇವೇಗೌಡ ಟೀಕಿಸಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರು ಪ್ರಬುದ್ಧರಾಗಿದ್ದು, ಧರ್ಮದ ಹೆಸರಿನಲ್ಲಿ ಭಾವನೆಗಳ ಜೊತೆಗೆ ಆಟವಾಡುವವರನ್ನು ಜನರು ಹತ್ತಿರದಿಂದ ಗಮನಿಸುತ್ತಿದ್ದಾರೆ. ಇಂತಹ ರಾಜಕೀಯ ಮಾಡುವವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು 130 ಕೋಟಿ ಜನ ಒಪ್ಪಿದ್ದಾರೆ. ಅಂಬೇಡ್ಕರ್ , ವಾಲ್ಮೀಕಿ, ಕನಕ, ವಿಶ್ವಕರ್ಮ, ಕೆಂಪೇಗೌಡ ಜಯಂತಿ ಆಚರಿಸುವಾಗ ಟಿಪ್ಪು ಜಯಂತಿಗೆ ಏಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರಶ್ನಿಸಿದರು.

ಟಪ್ಪು ಸುಲ್ತಾನ್ ವಸಾಹತುಷಾಹಿ ನೀತಿ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರ. ಅಲ್ಲದೇ  ಕೆರೆಗಳು, ನೀರಾವರಿ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕೈಗೊಂಡಿದ್ದರು ಎಂದರು.

ಅಲ್ಪಸಂಖ್ಯಾತರಿಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಜಾರಿಗೊಳಿಸಿದ ಶೇ. 4 ರಷ್ಟು ಮೀಸಲಾತಿಯನ್ನು ನೆನಪು ಮಾಡಿಕೊಂಡ ಜಿ. ಟಿ. ದೇವೇಗೌಡ. ಮುಸ್ಲಿಂರಿಗೆ ಶುಭಾಶಯ ಕೋರಿದರು.
SCROLL FOR NEXT