ಬೆಂಗಳೂರು:ಆಂಬಿಡೆಂಟ್ ಪ್ರಕರಣದಲ್ಲಿ ನಂಬಲಾರ್ಹ ಪುರಾವೆ ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ರೆಡ್ಡಿ ಬಂಧನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಅವರು ಶನಿವಾರ ಮಧ್ಯಾಹ್ನ ಸಿಸಿಬಿ ಕಚೇರಿಗೆ ತಮ್ಮ ವಕೀಲರೊಂದಿಗೆ ಆಗಮಿಸಿದ್ದರು. ಈ ವೇಳೆ ತನಿಖಾಧಿಕಾರಿಗಳು ತಡರಾತ್ರಿಯವರೆಗೂ ಸವಿಸ್ತಾರವಾಗಿ ವಿಚಾರಣೆ ನಡೆಸಿದರು ಎಂದು ತಿಳಿಸಿದರು.
ಆಂಬಿಡೆಂಟ್ ಪ್ರಕರಣದಲ್ಲಿ ರೆಡ್ಡಿ 20 ಕೋಟಿ ರೂಪಾಯಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿದ್ದರ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದೇವೆಂದು ತಿಳಿಸಿದರು.