ರಾಜ್ಯ

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ: ಕನ್ನಡ ದಾಖಲೆಗಳ ಭಾಷಾಂತರದಿಂದಾಗಿ ಸಿಬಿಐ ತನಿಖೆಯಲ್ಲಿ ವಿಳಂಬ

Manjula VN
ಬೆಂಗಳೂರು: ಸಾಫ್ಟ್'ವೇರ್ ಇಂಜಿನಿಯರ್ ಅಜಿತಾಭ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನಿಖಾಧಿಕಾರಿಗಳು ಸಂಗ್ರಹಿಸಿದ್ದ ದಾಖಲೆಗಳ ಭಾಷಾಂತರದಿಂದಾಗಿ ರಾಷ್ಟ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲು ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಅಧಿಕಾರಿಗಳು ಈವರೆಗೂ 1,000 ಪುಟಗಳ ದಾಖಲೆಗಳನ್ನು ಕನ್ನಡದಲ್ಲಿ ಸಂಗ್ರಹಿಸಿದ್ದು, ಇದೀಗ ಈ ದಾಖಲೆಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ತನಿಖೆ ಮತ್ತಷ್ಟು ವಿಳಂಬವಾಗುವ ಸಾಧ್ಯಗಳಿವೆ ಎಂದು ವರದಿಗಳು ತಿಳಿಸಿವೆ. 
ಪ್ರಕರಣದ ತನಿಖೆಯನ್ನು ಈ ಹಿಂದೆ ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದರು. ಪ್ರಕರಣ ಭೇದಿಸುವಲ್ಲಿ ಸಿಐಡಿ ಅಧಿಕಾರಿಗಳಿಗೆ ಸಾಧ್ಯವಾಗದ ಹಿನ್ನಲೆಯಲ್ಲಿ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಚೆನ್ನೈನಲ್ಲಿರುವ ಸಿಬಿಐ ಕಚೇರಿಗೆ ಭೇಟಿ ನೀಡಿದ ಅಧಿಕಾರಿಯೊಬ್ಬರು ಪ್ರಕರಣದ ಎಲ್ಲಾ ಕಡತಗಳು ಹಾಗೂ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದರು. ಪ್ರಸ್ತುತ ಅಧಿಕಾರಿ ಸಿಬಿಐಗೆ ನೀಡಿರುವ ಕಡತಗಳನ್ನು ಇಂಗ್ಲೀಷ್'ಗೆ ಭಾಷಾಂತರ ಮಾಡಲು ತಿಂಗಳು ಕಾಲ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
2017 ಡಿ.17 ರಂದು ಕುಮಾರ್ ಅಜಿತಾಭ್ ಅವರು ನಾಪತ್ತೆಯಾಗಿದ್ದರು, ಬಿಹಾರ ಮೂಲದವರಾಗಿರುವ ಅಜಿತಾಭ್ ಅವರು ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂನಲ್ಲಿ ಕಳೆದ 5 ವರ್ಷಗಳಿಂಕ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ತಮ್ಮ ಸಿಯಾಜ್ ಕಾರನ್ನು ಮಾರಟ ಮಾಡುವುದಾಗಿ ಒಎಲ್ಎಕ್ಸ್ ನಲ್ಲಿ ಪ್ರಕಟಿಸಿದ್ದರು. ಕಾರನ್ನು ಮಾರಾಟ ಮಾಡುವುದಾಗಿ ಪ್ರಕಟಿಸಿದ ಬಳಿಕ ಅಜಿತಾಭ್ ಕರೆ ಬಂದಾಗಲೆಲ್ಲಾ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. 
ಡಿ.18 ರಂದೂ ಕೂಡ ಅಜಿತಾಭ್ ಅವರ ಮೊಬೈಲ್'ಗೆ ಕರೆ ಬಂದಿದೆ ಎಂದಿನಂತೆಯೇ ಕಾರಿನಲ್ಲಿ ಹೊರ ಹೋದ ಬಳಿಕ ಮತ್ತೆ ವಾಪಸ್ಸಾಗಿರಲಿಲ್ಲ. ಒಎಲ್ಎಕ್ಸ್ ನಲ್ಲಿ ಜಾಹೀರಾತು ನೋಡಿದ ಬಳಿಕ ಅಜಿತಾಭ್ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆಂದು ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಿಸುತ್ತಿದ್ದರು. 
SCROLL FOR NEXT