ರಾಜ್ಯ

ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಹಠಾತ್ ನಿಧನ

Sumana Upadhyaya

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್​ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮೀಳಾ ಉಮಾಶಂಕರ್(44 ವರ್ಷ) ತೀವ್ರ ಹೃದಯಾಘಾತದಿಂದ ಗುರುವಾರ  ತಡರಾತ್ರಿ ನಿಧನ ಹೊಂದಿದ್ದಾರೆ.

ಕಳೆದ  ರಾತ್ರಿ 12.50ರಲ್ಲಿ ರಮೀಳಾ ಅವರಿಗೆ ತೀವ್ರ ಎದೆನೋವು ಕಾಣಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್​ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಗೋವಿಂದರಾಜನಗರದ ಕಾವೇರಿಪುರಂ ವಾರ್ಡ್​ನಿಂದ (103) ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮೀಳಾ ಅವರು ಜಯ ಸಾಧಿಸಿದ್ದರು. ಕಳೆದ ವಾರ ಸೆಪ್ಟೆಂಬರ್ 28ರಂದು ಬಿಬಿಎಂಪಿಯ ಉಪ ಮೇಯರ್​ ಆಗಿ ಅವರು ಆಯ್ಕೆಯಾಗಿದ್ದರು.

ನಿನ್ನೆ ಬೆಳಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು  ನಮ್ಮ ಮೆಟ್ರೋಗೆ ಭೇಟಿ ನೀಡಿದ್ದಾಗ, ಉಪ ಮುಖ್ಯಮಂತ್ರಿ ಪರಮೇಶ್ವರ್​ ಅವರು ನಿನ್ನೆ ಬೆಳಗ್ಗೆಯೇ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ಪರಿಶೀಲನೆಯಲ್ಲಿ ತೊಡಗಿದ್ದಾಗ ರಮೀಳಾ ಅವರೂ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭಾಗವಹಿಸಿದ್ದರು. ಹೀಗೆ ದಿನವಿಡೀ ಲವಲವಿಕೆಯಿಂದಲೇ ಇದ್ದ ರಮೀಳಾ ಅವರು ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ರಮೀಳಾ ಅವರ ಹಠಾತ್ ನಿಧನದಿಂದ ಕುಟುಂಬ ತೀವ್ರ ದುಃಖತಪ್ತವಾಗಿದೆ. ಅವರ ಬಂಧುಗಳು, ಸ್ನೇಹಿತರು, ರಾಜಕೀಯ ಮುಖಂಡರಿಗೆ ಸಹ ಈ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ಅವರ ಅಂತ್ಯಕ್ರಿಯೆ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.

ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಗಳಿಸಿದ್ದ ರಮೀಳಾ ಪತಿ ಹಾಗೂ ಇಬ್ಬರು ಮಕ್ಕಳಾದ ವರುಣ್ ಕುಮಾರ್ ಮತ್ತು ಭೂಮಿಕಾರನ್ನು ಅಗಲಿದ್ದಾರೆ.


SCROLL FOR NEXT