ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದು, ಜಾಹೀರಾತು ಫಲಕ ಅಳವಡಿಸಲು ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ನಿಷೇಧದ ನಂತರವೂ ಮೈಸೂರು ರಸ್ತೆಯ ಪಂತಪಾಳ್ಯದ ಬಳಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಜಾಗದಲ್ಲಿದ್ದ ಜಾಹೀರಾತು ಫಲಕದ ಲೋಹದ ಚೌಕಟ್ಟನ್ನು ತೆರವುಗೊಳಿಸಿರಲಿಲ್ಲ. ಹೀಗಾಗಿ ಆರ್ ಆರ್ ನಗರ ಉಪ ವಿಭಾಗ ಸಹಾಯಕ ಕಂದಾಯ ಅಧಿಕಾರಿ ಮುತ್ತು ರಾಜ್ ಅವರು ಸೆಪ್ಟೆಂಬರ್ 24ರಂದು ಸಚಿವರ ವಿರುದ್ಧ ದೂರು ನೀಡಿದ್ದರು.
ಕಂದಾಯ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಸಚಿವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಬ್ಯಾಟರಾಯನಪುರ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹೊರ್ಡಿಂಗ್ ಹಾಗೂ ಫ್ಲೆಕ್ಸ್ ಗಳಿಂದ ನಗರದ ಸೌಂಧರ್ಯಕ್ಕೆ ಧಕ್ಕೆಯಾಗುತ್ತಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿತ್ತು. ಬಳಿಕ ನಗರದಲ್ಲಿ ಅನಧಿಕೃತ ಜಾಹೀರಾತು, ಫ್ಲೆಕ್ಸ್ ಗಳನ್ನು ಬಿಬಿಎಂಪಿ ನಿಷೇಧಿಸಿತ್ತು.
ಜಾಗದ(ಸ್ವತ್ತು ಸಂಖ್ಯೆ 219/20A/23) ಮಾಲೀಕರಾದ ಶಿವಕುಮಾರ್ ಅವರಿಗೆ ನೋಟಿಸ್ ನೀಡಿದ ಬಳಿಕವೂ ಲೋಹದ ಚೌಕಟ್ಟು ತೆರವುಗೊಳಿಸಿದೆ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮುತ್ತುರಾಜ್ ಅವರು ದೂರು ನೀಡಿದ್ದಾರೆ.