ರಾಜ್ಯ

ಮೈಸೂರು ದಸರಾ ಹಿನ್ನೆಲೆ: ಮುಷ್ಕರ ನಿರತ ಪೌರ ಕಾರ್ಮಿಕರೊಂದಿಗೆ ಮುಖ್ಯಮಂತ್ರಿ ಹೆಚ್ ಡಿಕೆ ಮಾತುಕತೆ

Nagaraja AB

ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಂಸ್ಕೃತಿಕ ರಾಜಧಾನಿಯಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ನಾಡ ಹಬ್ಬ ದಸರಾ ವೇಳೆಗೂ ತ್ಯಾಜ್ಯ ಸಮಸ್ಯೆಯಿಂದ  ಮುಕ್ತವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಆದಾಗ್ಯೂ, ಖಾಯಂ ನೌಕರರು ನಗರವನ್ನು ಸ್ವಚ್ಛಗೊಳಿಸಲು ರಾಜ್ಯ ಪೌರ ಕಾರ್ಮಿಕರ ಸಂಘ ಅವಕಾಶ ಮಾಡಿಕೊಟ್ಟಿದ್ದು,  ಸ್ವಲ್ಪ ಪರಿಹಾರ ಸಿಕ್ಕಂತಾಗಿದೆ.  ಆದರೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ನಾರಾಯಣ ಹೇಳಿದ್ದಾರೆ.

 ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ಸೇವೆಯನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪೌರ ಕಾರ್ಮಿಕರು ಆಕ್ಟೋಬರ್ 3 ರಿಂದಲೂ ಮುಷ್ಕರ ನಡೆಸುತ್ತಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರೊಡನೆ ನಡೆಸುವ ಮಾತುಕತೆ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಮಾತುಕತೆ ಫಲಪ್ರದವಾದರೆ ದಸರಾ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು, ಇಲ್ಲವಾದರೆ  ಕೆಲಸ ಮಾಡದೆ  ರಾಜ್ಯಮಟ್ಟಕ್ಕೂ ಮುಷ್ಕರವನ್ನು ವಿಸ್ತರಿಸಲಾಗುವುದು ಎಂದು ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, 300ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಬಾಡಿಗೆಗೆ ಪಡೆದುಕೊಂಡು ಸ್ವಚ್ಛಗೊಳಿಸಲಾಗುವುದು, ಖಾಸಗಿಯಾಗಿ ಎರಡು ಸ್ವಚ್ಛಗೊಳಿಸುವ ಯಂತ್ರವನ್ನು  ತರಲಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು  ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್   ತಿಳಿಸಿದ್ದಾರೆ.

SCROLL FOR NEXT