ರಾಜ್ಯ

ಮೈಸೂರು ವಿವಿ: ಆಡಳಿತಾತ್ಮಕ ಲೋಪದೋಷ ಪ್ರಶ್ನಿಸಿದ್ದ ದಲಿತ ಪಿಎಚ್ ಡಿ ವಿದ್ಯಾರ್ಥಿ ಈಗ ಕೇರಾಫ್ ಫುಟ್ ಪಾತ್

Lingaraj Badiger
ಮೈಸೂರು: ಮೈಸೂರು ವಿಶ್ವ ವಿದ್ಯಾಲಯದ ಆಡಳಿತದಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದಿದ್ದಕ್ಕೆ ದಲಿತ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ಬದುಕು ಈಗ ಅಕ್ಷರಃ ಸಹ ಬೀದಿಗೆ ಬಂದಿದ್ದು, ಕಳೆದ ಒಂದು ವಾರದಿಂದ ಹಾಸ್ಟೆಲ್ ನ ಕಾರಿಡಾರ್ ನಲ್ಲಿ ಜೀವನ ಸಾಗಿಸುತ್ತಿದ್ದಾರೆ. 
ವಿವಿಯಲ್ಲಿನ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ನಡೆಸಿದ ದಲಿತ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ವಸತಿ ನಿಲಯದಿಂದ ಹೊರ ಹಾಕಲಾಗಿದೆ.
ಆಗಸ್ಟ್ 18ರಂದು ಹಾಸ್ಟೆಲ್ ಖಾಲಿ ಮಾಡುವಂತೆ ವಿವಿಯ ಕುಲಸಚಿವರು ಸೂಚಿಸಿದ್ದರು. ಆದರೆ ಖಾಲಿ ಮಾಡದ ಮಹೇಶ್ ಅವರನ್ನು ಸೆಪ್ಟೆಂಬರ್ 10ರಂದು ಬಲವಂತವಾಗಿ ತೆರವುಗೊಳಿಸಲಾಗಿದೆ.
ನಾನು ಮತ್ತು ಇನ್ನು ಇಬ್ಬರು ವಿದ್ಯಾರ್ಥಿಗಳು ಎಸ್ಎಫ್ಐ ಸದಸ್ಯರೊಂದಿಗೆ ವಿವಿ ಕುಲಸಚಿವರ ವಿರುದ್ಧ ಘೋಷಣೆ ಕೂಗಿದ್ದೆವು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದ್ದೇವೆ. ಅಲ್ಲದೆ ವಿವಿಯಲ್ಲಿನ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕಾಗಿ ನನಗೆ ಈ ಶಿಕ್ಷೆ ನೀಡಲಾಗಿದೆ ಎಂದು ಮಹೇಶ್ ಹೇಳಿದ್ದಾರೆ.
ಈ ಮಧ್ಯೆ, ಜೂನ್ 27, ಅಕ್ರಮವಾಗಿ ನೇಮಕಗೊಂಡಿರುವ 124 ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಮತ್ತು ಈ ಸಂಬಂಧ ಮಾಜಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಹಾಗೂ ಕುಲಸಚಿವ ಪೊ.ಆರ್ ರಾಜಣ್ಣ ವಿರುದ್ಧ ಕೇಸ್ ದಾಖಲಿಸುವಂತೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಆದೇಶಿಸಿದ್ದಾರೆ.
ಮತ್ತೊಂದು ಕಡೆ ಮಹೇಶ್ ಅವರನ್ನು ಹಾಸ್ಟೆಲ್ ನಿಂದ ಹೊರ ಹಾಕಿದ್ದ ವಿವಿ ಕ್ರಮ ಖಂಡಿಸಿ ದಲಿತಪರ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಮಹೇಶ್ ಸೋಸಲೆ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಕುಲಸಚಿವರ ಆದೇಶವನ್ನು ರದ್ದುಪಡಿಸಬೇಕು ಮತ್ತು ಅವರಿಗೆ ನ್ಯಾಯ ಒದಗಿಸಿ ಅವರ ಸಂಶೋಧನಾ ಶಿಕ್ಷಣ ಪೊರೈಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
SCROLL FOR NEXT