ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದ ಸರ್ಕಾರ, ನಂತರ ಪತ್ರಕರ್ತರಿಂದ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆ ಪ್ರಸ್ತಾಪದಿಂದ ಹಿಂದಕ್ಕೆ ಸರಿದಿದೆ.
ಮುಖ್ಯಮಂತ್ರಿಯೂ ಸೇರಿದಂತೆ ಸಚಿವರ ಪತ್ರಿಕಾಗೋಷ್ಠಿಗಾಗಿ ವಿಧಾನಸೌಧದ ನೆಲಮಹಡಿಯಲ್ಲಿರುವ ಕೊಠಡಿಯೊಂದರನ್ನು ಸಿದ್ಧಪಡಿಸುವ ಸಂಬಂಧ ಕಳೆದ ಆಗಸ್ಟ್ ತಿಂಗಳಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಆ ಪ್ರಕಾರ ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಆ ಆದೇಶದ ಮೂಲಕ 3ನೇ ಮಹಡಿಯಲ್ಲಿ ಪತ್ರಕರ್ತರಿಗಾಗಿ ಮೀಸಲಿರಿಸಿದ್ದ ಕೊಠಡಿಯನ್ನು ನೆಲಮಹಡಿಯ ಕೊಠಡಿಗೆ ಸೀಮಿತಗೊಳಿಸಿ ಇನ್ನುಳಿದೆಡೆ ಸಂಚರಿಸುವುದನ್ನು ನಿರ್ಬಂಧಿಸುವ ಉದ್ದೇಶವೂ ಆಗಡಿತ್ತು ಎಂಬ ಮಾಹಿತಿಗಳು ಬಹಿರಂಗಗೊಂಡಿತ್ತು.
ಸಚಿವ ಪ್ರತಿಕ್ರಿಯೆಗಾಗಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಬೇರೆಡೆ ಸುತ್ತಾಡದೆ ಅವರಾಗಿಯೇ ಬಂದು ಪ್ರತಿಕ್ರಿಯೆ ನೀಡಿದ್ದಲ್ಲಿ ಮಾತ್ರ ಪಡೆದುಕೊಳ್ಳಬೇಕು ಎಂಬ ಸರ್ಕಾರದ ಹುನ್ನಾಗ ಗೊತ್ತಾಗುತ್ತಿದ್ದಂತೆಯೇ ಪತ್ರಕರ್ತರ ವಲಯದಿಂದ ಪ್ರತಿರೋಧ ವ್ಯಕ್ತವಾಗತೊಡಗಿತು.
ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಚೇರಿ ಕಾರ್ಯಪ್ರವೃತ್ತರಾಗಿ ಗೊಂದಲವನ್ನು ನಿವಾರಿಸಿದ್ದು, ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.
ಈಗಿರುವಂತೆಯೇ ಪತ್ರಕರ್ತರ ಕೊಠಡಿ ಮೂರನೇ ಮಹಡಿಯಲ್ಲಿಯೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics