ರಾಜ್ಯ

ತಲಕಾವೇರಿಯಲ್ಲಿ ತೀರ್ಥೋದ್ಭವ, ಸಾವಿರಾರು ಭಕ್ತರಿಂದ ಕಾವೇರಿ ಮಾತೆಗೆ ನಮನ

Raghavendra Adiga
ಮಡಿಕೇರಿ: ಪವಿತ್ರ ನದಿ ಕಾವೇರಿ ಜನ್ಮಸ್ಥಾನ ತಲಕಾವೇರಿಯಲ್ಲಿ ಇಂದು (ಬುಧವಾರ) ತೀರ್ಥೋದ್ಭವದ ಸಂಭ್ರಮ. ಸಂಜೆ 6.43ಕ್ಕೆ ಸರಿಯಾಗಿ ಕಾವೇರಿ ಮಾತೆ ತಲಕಾವೇರಿಯ ತೀರ್ಥಕುಂಡದಲ್ಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ಈ ಪವಿತ್ರ ಘಳಿಗೆಗೆ ನಾಡಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.
ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕುತ್ತಿದ್ದಂತೆ ಅರ್ಚಕರು ತೀರ್ಥ ವನ್ನು ಚೆಲ್ಲಿ ಭಕ್ತರನ್ನು ಸಂತೃಪ್ತಗೊಳಿಸಿದ್ದಾರೆ. ಪೂಜಾ ವಿಧಿ ವಿಧಾನಗಳು ಸಂಪ್ರದಾಯಬದ್ದವಾಗಿ ನೆರವೇರಿದೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ತೀರ್ಥೋದ್ಭವದ ಶುಭಘಳಿಗೆಗೆ ರಾಜ್ಯದ ಮುಖ್ಯಮಂತ್ರಿಗಳೊಬ್ಬರು ಸಾಕ್ಷಿಯಾಗಿದ್ದಾರೆ. ಇಂದು ಬೆಳಿಗ್ಗೆ ಮಡಿಕೇರಿಗೆ ಆಗಮಿಸಿದ್ದ ಕುಮಾರಸ್ವಾಮಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ಬಳಿಕ ಭಾಗಮಂಡಲಕ್ಕೆ ಆಗಮಿಸಿದ್ದರು. ಅಲ್ಲಿ ಭಗಂಡೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತಲಕಾವೇರಿಗೆ ಆಗಮಿಸಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡಿದ್ದಾರೆ.
ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆಯನ್ನು ಧಿಕ್ಕರಿಸಿ ಮುಖ್ಯಮಂತ್ರಿ ಕಾವೇರಿ ಜನ್ಮಸ್ಥಾನಕ್ಕೆ ಭೇಟಿ ಕೊಟ್ಟಿರುವುದು ವಿಶೇಷವಾಗಿತ್ತು.
SCROLL FOR NEXT