ರಾಜ್ಯ

ಶೀಘ್ರ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ: ಸಿಎಂ ಕುಮಾರಸ್ವಾಮಿ

Lingaraj Badiger
ಮಡಿಕೇರಿ: ಪ್ರವಾಹ ಪೀಡಿತ ಕೊಡಗು ನಾಡನ್ನು ಹೊಸದಾಗಿ ಕಟ್ಟಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಘೋಷಿಸಿದ್ದಾರೆ.
ಇಂದು ಕೊಡಗಿನ ಪ್ರವಾಹ ಸಂತ್ರಸ್ತರ ಜೊತೆ ಸಂವಾದ ನಡೆಸಿದ ಸಿಎಂ ಕುಮಾರಸ್ವಾಮಿ, ನಾನು ಬೆಂಗಳೂರಿನಿಂದ ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೇನೆ. ಇಲ್ಲಿ ಯಾವುದೇ ರಾಜಕೀಯ ಭಾಷಣ ಮಾಡುವುದಿಲ್ಲ ಎಂದರು.
ಭಾಗಮಂಡಲಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಹೇಳಿದ್ದರು. ಆದರೆ ನನಗೆ ಭಾಗಮಂಡಲವೇನೂ ಹೊಸದಲ್ಲ, ಭಾಗಮಂಡಲಕ್ಕೆ ಬಂದು ಹೋದ ಮೇಲೂ ನಾನು ಸಿಎಂ ಆಗಿದ್ದೇನೆ. ನನಗೆ ಜನ ಮುಖ್ಯ ಎಂದರು.
ಕೊಡಗು ಪ್ರವಾಹ ಪೀಡಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರು ಮನವಿ ಮಾಡಿದ್ದರು. ಅದಕ್ಕೆ ಸಿಎಂ ಪೂರಕವಾಗಿ ಸ್ಪಂದಿಸಿದ್ದಾರೆ.
ಇದೇ ವೇಳೆ ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ರಾಷ್ಟ್ರೀಕೃತ ಬ್ಯಾಂಕ್ ನವರು ನಮಗೆ ಸರಿಯಾಗಿ ಸ್ಪಂದಿಸಿದ್ದರೆ ಇಷ್ಟೊತ್ತಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಆಗುತ್ತಿತ್ತು. ಆದರೆ ಅವರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಾಲ ಮನ್ನಾ ಬಗ್ಗೆ ಎರಡು ತಿಂಗಳ ಹಿಂದೆಯೇ ರಾಷ್ಟ್ರೀಕೃತ ಬ್ಯಾಂಕ್ ಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದೇನೆ. ಆದರೆ, ಅವರು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ ಹಾಗೂ ಸಹಕರಿಸುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
SCROLL FOR NEXT