ರಾಜ್ಯ

ಎಲ್ಲೆಡೆ ಕೇಳಿಬರುತ್ತಿದೆ ಮಿ ಟೂ: ಆದರೆ ಗಾರ್ಮೆಂಟ್ಸ್ ಮಹಿಳಾ ನೌಕರರ ಬವಣೆ ಕೇಳುವವರ್ಯಾರು?

Sumana Upadhyaya

ಬೆಂಗಳೂರು: ಇಂಗ್ಲೆಂಡ್ ಮೂಲದ ಸಿಸ್ಟರ್ಸ್ ಚಾರಿಟಿ ಎಂಬ ಸಂಸ್ಥೆ 2016ರಲ್ಲಿ ನಡೆಸಿದ ಅಧ್ಯಯನದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಕಾರ್ಯನಿರ್ವಹಿಸುವ ಏಳು ಮಂದಿ ಮಹಿಳೆಯರಲ್ಲಿ ಒಬ್ಬರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಮತ್ತು 14 ಮಂದಿಯಲ್ಲಿ ಒಬ್ಬರು ಶಾರೀರಿಕ ಹಿಂಸೆಗೆ ಬಲಿಯಾಗುತ್ತಾರೆ ಎಂದು ಹೇಳಲಾಗಿತ್ತು.

ಈ ವರದಿ ಬಂದು ಎರಡು ವರ್ಷಗಳು ಕಳೆದಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಜನರ ಅಭಿಪ್ರಾಯಗಳು ಬದಲಾಗಿದ್ದು ಬಹುತೇಕ ಮಹಿಳೆಯರು ತಮ್ಮ ಅನುಭವಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಾರೆ.ತಾವು ಕೆಲಸ ಮಾಡುವ ಸ್ಥಳದಲ್ಲಿ ಎದುರಿಸುತ್ತಿರುವ ಕಿರುಕುಳ ಮತ್ತು ಹಿಂಸಾಚಾರಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುವುದಿಲ್ಲ.

31 ವರ್ಷದ ಸವಿತಾ(ಹೆಸರು ಬದಲಿಸಲಾಗಿದೆ)ಗೆ ತಾನು ಕೆಲಸಕ್ಕೆ ಹೋಗುವ ಸಂಸ್ಥೆಗೆ ಪ್ರತಿದಿನ ಬೆಳಗ್ಗೆ ಹೋಗುವ ಮುನ್ನ ಮಾನಸಿಕವಾಗಿ ಸಿದ್ಧಳಾಗಿಯೇ ಹೋಗಬೇಕಾಗುತ್ತದೆ ಎನ್ನುತ್ತಾರೆ. ಅಲ್ಲಿ ಕೆಲಸ ಮಾಡುವುದರ ಜೊತೆಗೆ ಅಲ್ಲಿನ ಪುರುಷ ಸಿಬ್ಬಂದಿ ಜೊತೆ ಹೇಗೆ ನಡೆದುಕೊಳ್ಳಬೇಕು, ಪುರುಷ ಸಿಬ್ಬಂದಿಗಳು ಒಬ್ಬೊಬ್ಬರೆ ಇರುವಾಗ ಹೇಗೆ ಅವರಿಂದ ತಪ್ಪಿಸಿಕೊಳ್ಳಬೇಕು ಎಂಬಿತ್ಯಾದಿಗಳನ್ನು ಸಹ ಯೋಚನೆ ಮಾಡಬೇಕಾಗುತ್ತದಂತೆ.

ಸವಿತಾ ಕೆಲಸ ಮಾಡುವಂತೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಫ್ಲೋರ್ ಮ್ಯಾನೇಜರ್ಸ್ ಗಳಾಗಿ ಪುರುಷ ಸಿಬ್ಬಂದಿಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಮಾಡುವುದು ಸವಾಲಿನ ಕೆಲಸವೇ ಸರಿ.

ರಶ್ಮಿ(ಹೆಸರು ಬದಲಿಸಲಾಗಿದೆ), ತಮಗೆ ಮ್ಯಾನೇಜರ್ ಗಳು ತಮಗೆ ಸಹಕರಿಸುವಂತೆ ಇಲ್ಲದಿದ್ದರೆ ಕೆಲಸಕ್ಕೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕುತ್ತಾರಂತೆ. ಸಹಕರಿಸದಿದ್ದರೆ ತಮ್ಮನ್ನು ಕೆಲಸದಲ್ಲಿ ಗುರಿಯಾಗಿರಿಸುವುದು, ತೊಂದರೆ ನೀಡುವುದು ಇತ್ಯಾದಿ ಮಾಡುತ್ತಾರೆ. ಹೀಗಾಗಿ ನಾನು ಹಿಂದಿನ ಆಫೀಸು ಬಿಟ್ಟೆ ಎನ್ನುತ್ತಾರೆ.

2013ರಲ್ಲಿ ಜಾರಿಗೆ ಬಂದ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಸರಿಯಾಗಿ ಜಾರಿಗೆ ಬರುವಂತೆ ಕಾಣುತ್ತಿಲ್ಲ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶ ಮತ್ತು ಮೈಸೂರು ರಸ್ತೆಗಳಲ್ಲಿ ಬಹುತೇಕ ಗಾರ್ಮೆಂಟ್ಸ್ ಫ್ಯಾಕ್ಟರಿಗಳಿದ್ದು ಇಲ್ಲಿ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಲೈಂಗಿಕ ಕಿರುಕುಳ ತಡೆಯಲು ರಚಿಸಿರುವ ಆಂತರಿಕ ದೂರು ಸಮಿತಿಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ದೇಶದೆಲ್ಲೆಡೆ ಈಗ ಮಿ ಟೂ ಚಳವಳಿ ಜೋರಾಗಿದ್ದು ಸಿನಿಮಾ, ರಾಜಕೀಯ, ಉದ್ಯಮ ಕ್ಷೇತ್ರಗಳಲ್ಲಿ ಕೇಳಿಬರುತ್ತಿರುವ ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಬವಣೆ ಯಾರೂ ಕೇಳುವಂತಹ ಪರಿಸ್ಥಿತಿಯಲ್ಲಿಲ್ಲ ಎಂಬಂತಾಗಿದೆ.

SCROLL FOR NEXT