ರಾಜ್ಯ

ಸಾರ್ವಜನಿಕರ ವಿರೋಧವಿದ್ದರೆ ತೆರೆದ ಬೀದಿ ಉತ್ಸವ ನಿಲ್ಲಿಸಲಾಗುವುದು: ಹೆಚ್ ಡಿ ಕುಮಾರಸ್ವಾಮಿ

Sumana Upadhyaya

ಮೈಸೂರು: ತೆರೆದ ಬೀದಿ ಉತ್ಸವದಲ್ಲಿ ಯುವತಿಯರು ಮತ್ತು ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಅಗತ್ಯಬಿದ್ದರೆ ಸರ್ಕಾರ ಈ ಉತ್ಸವವನ್ನು ನಿಲ್ಲಿಸಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರು ನಿರ್ಭೀತಿಯಿಂದ ಸ್ವತಂತ್ರವಾಗಿ ಜೀವನ ನಡೆಸಬೇಕು, ಆದರೆ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ತೆರೆದ ಬೀದಿ ಉತ್ಸವದಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಕಿರುಕುಳ ನಡೆಸಿದ ಆರೋಪಗಳು ಕೇಳಿಬಂದಿವೆ. ಇಂತಹ ಉತ್ಸವಗಳನ್ನು ಆಚರಿಸುವ ಮುನ್ನ ಆರಂಭದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಸೇರಿದಂತೆ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಗ ಮಧ್ಯೆ ಪ್ರವೇಶಿಸಿದ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್, ಭದ್ರತೆಯನ್ನು ಹೆಚ್ಚಿಸುವುದಾಗಿ ಹೇಳಿದರು. ಆದರೆ ಅವರು ಬೀದಿ ಉತ್ಸವವನ್ನು ನಿಲ್ಲಿಸುವುದಕ್ಕೆ ಒಲವು ತೋರಲಿಲ್ಲ. ಈ ಉತ್ಸವದಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಈ ಮಧ್ಯೆ ಬೀದಿ ಉತ್ಸವದಲ್ಲಿ ಮಹಿಳೆಯರ ಮೇಲೆ ನಡೆದ ಕಿರುಕುಳ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ವ್ಯಾಪಕವಾಗಿ ಟೀಕಿಸಿದ್ದಾರೆ. ಇದರಿಂದ ಮಹಿಳೆಯರು ಸುರಕ್ಷಿತವಾಗಿಲ್ಲ ಮತ್ತು ಸರ್ಕಾರ ಅವರಿಗೆ ಭದ್ರತೆ ನೀಡುತ್ತಿಲ್ಲ ಎಂದು ಗೊತ್ತಾಗುತ್ತದೆ. ಈ ಘಟನೆ ಮೈಸೂರು ನಗರಕ್ಕೆ ಒಂದು ಕಪ್ಪುಚುಕ್ಕೆ ಎಂದು ಅವರು ಹೇಳಿದರು.

SCROLL FOR NEXT