ರಾಜ್ಯ

ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧಕಿಯಾದ ಆಟೋ ಚಾಲಕಿಯ ಕಥೆ!

Sumana Upadhyaya

ರಾಯಚೂರು: ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸಹಾಯದಿಂದ ರಾಯಚೂರಿನ ಮಹಿಳೆ ತನ್ನ ಜೀವನದ ಕಷ್ಟಗಳನ್ನು ಗೆದ್ದು ಬೇರೆ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ.

ಆಕೆಯ ಹೆಸರು ನಿರ್ಮಲಾ, ವೃತ್ತಿಯಲ್ಲಿ ಆಟೋ ಚಾಲಕಿ. 1992ರಲ್ಲಿ ರತ್ನಪ್ರಭಾ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗ ಆಟೋ ಚಲಾಯಿಸಲು ಮಹಿಳೆಯರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದರು. ಇದೀಗ 26 ವರ್ಷ ಕಳೆದ ನಂತರ ಅದು ಒಬ್ಬ ಮಹಿಳೆಯನ್ನು ಜೀವನದಲ್ಲಿ ಗೆಲ್ಲುವಂತೆ ಮಾಡಿದೆ. ಮನೆಯಲ್ಲಿ ಕುಡಿತದ ಚಟವನ್ನು ಹೊಂದಿದ್ದ ಪತಿ, ಬಡತನ ಇವುಗಳನ್ನೆಲ್ಲಾ ಮೆಟ್ಟಿ ನಿಂತು ಮಹಿಳೆ ಆಟೋ ಚಲಾಯಿಸಿ ಜೀವನ ನಡೆಸಿದ್ದಾರೆ.

ಹಿಂದುಳಿದ ಸಮುದಾಯದಿಂದ ಬಂದ ನಿರ್ಮಲಾ ಆಟೋ ಓಡಿಸಿ ಬಂದ ಹಣದಲ್ಲಿ ಒಂದು ತುಂಡು ಭೂಮಿಯನ್ನು ಕೂಡ ಖರೀದಿಸಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ನಿರ್ಮಲಾ, ಮಾಜಿ ಜಿಲ್ಲಾಧಿಕಾರಿ ರತ್ನಪ್ರಭಾ ನಮಗೆ ಸರ್ಕಾರದ ಯೋಜನೆಯಡಿ ಆಟೋ ಕೊಡಿಸಿದ್ದರು. ಆಟೋಗೆ ಆರಂಭದಲ್ಲಿ ಸರ್ಕಾರ 6 ಸಾವಿರ ರೂಪಾಯಿ ನೀಡಿತು. ಬ್ಯಾಂಕಿನಿಂದ 34 ಸಾವಿರ ರೂಪಾಯಿ ಸಾಲ ಸಿಕ್ಕಿತು. ನನ್ನನ್ನು ಸೇರಿ 11 ಮಹಿಳೆಯರಿಗೆ ಆಟೋ ಸಿಕ್ಕಿತು. ಆದರೆ ಇದೀಗ ಆಟೋ ಓಡಿಸುತ್ತಿರುವುದು ನಾನೊಬ್ಬಳೇ. ಇತರ ಮಹಿಳೆಯರು ತಾವು ಓಡಿಸುವುದು ಬಿಟ್ಟು ಪತಿಯರಿಗೆ ನೀಡಿದ್ದಾರೆ ಎನ್ನುತ್ತಾರೆ.

ಆಟೋ ಓಡಿಸಲು ಆರಂಭಿಸಿದ ಮೂರು ವರ್ಷ ಕಳೆದ ನಂತರ ಮದುವೆಯಾಯಿತು. ನನ್ನ ಪತಿ ಕೂಡ ಆಟೋ ಓಡಿಸುತ್ತಿದ್ದರು. ಆದರೆ ಆತ ಮದ್ಯವ್ಯಸನಿ. ಹೀಗಾಗಿ ಬಂದ ಹಣವನ್ನೆಲ್ಲಾ ದುಂದುವೆಚ್ಚ ಮಾಡುತ್ತಿದ್ದರು. ನಮಗೆ ದಿನನಿತ್ಯ ಜೀವನ ಸಾಗಿಸುವುದೇ ಕಷ್ಟವಾಯಿತು. ಸ್ವಲ್ಪ ಸಮಯ ಆಟೋ ಓಡಿಸುವುದು ನಿಲ್ಲಿಸಿ ನಂತರ ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಆತ ಸೇರಿದರು. ನನ್ನ ಪತಿ ಕೂಡ ನಾನು ಆಟೋ ಓಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಆದರೆ ನಾನು ಹಠ ಹಿಡಿದು ಮುಂದುವರಿಸಿದೆ. ಕೆಲಸದಲ್ಲಿ ನನಗೆ ಸಹ ಲೈಂಗಿಕ ಕಿರುಕುಳ ಅನುಭವವಾಗಿದೆ. ಅದನ್ನು ನಾನು ಪರಿಣಾಮಕಾರಿಯಾಗಿ ಎದುರಿಸುತ್ತಿದ್ದೆ. ಇಂದು ಎಲ್ಲಾ ಕಷ್ಟಗಳನ್ನು ಎದುರಿಸಿ ಪುರುಷರಿಗೆ ಸಮನಾಗಿ ನಿಂತಿದ್ದೇನೆ ಎಂದು ನಿರ್ಮಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

SCROLL FOR NEXT