ರಾಜ್ಯ

ಹುಬ್ಬಳ್ಳಿ: ಗಾಳಿಪಟ ಹಾರಿಸುತ್ತ ರೈಲ್ವೇ ಹಳಿ ಮೇಲೆ ಬಿದ್ದ ಬಾಲಕ, ಕಾಲು ತುಂಡು

Manjula VN
ಹುಬ್ಬಳ್ಳಿ: ಗಾಳಿಪಟ ಹಾರಿಸುತ್ತಾ ಆಯಪತ್ತಿ ರೈಲು ಹಳಿ ಮೇಲೆ ಬಿದ್ದ ಬಾಲಕನ ಕಾಲಿನ ಮೇಲೆ ರೈಲು ಚಲಿಸಿದ ಪರಿಣಾಮ ಎರಡೂ ಕಾಲುಗಳು ತುಂಡಾಗಿರುವ ಘಟನೆ ಹುಬ್ಬಳ್ಳಿಯ ಗಿರಿರಾಜ್ ನಗರ ಪ್ರದೇಶದಲ್ಲಿ ನಡೆದಿದೆ. 
ಸಾಗರ ಜಾಲಗಾರ (15) ಕಾಲು ಕಳೆದುಕೊಂಡ ಬಾಲಕನಾಗಿದ್ದಾನೆ. ಆಯುಧ ಪೂಜೆ ದಿನ ಸಾಗರ ಹಾಗೂ ಆತನ ಗೆಳೆಯರು ಗುಡ್ಡದ ಮೇಲೆ ಗಾಳಿಪಟ ಹಾರಿಸುತ್ತಿದ್ದರು. ಈ ವೇಳೆ ಸಮತೋಲನ ಕಳೆದುಕೊಂಡ ಬಾಲಕ ಗುಡ್ಡದ ಕೆಳಗಿನ ಹಳಿಯ ಮೇಲೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಉಣಕಲ್ ರೈಲು ನಿಲ್ದಾಣದಿಂದ ಹೊರಟ ರೈಲಿನ ಲೋಕೋ ಪೈಲೆಟ್ ಬಾಲಕ ಬಿದ್ದಿದ್ದನ್ನು ಗಮನಿಸಿ ರೈಲು ನಿಲ್ಲಿಸಲು ಯತ್ನ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ರೈಲು ಮುಂದೆ ಹೋಗಿ ಬಾಲಕನ ಕಾಲುಗಳ ಮೇಲೆ ಹರಿದಿದೆ.
ರೈಲು ನಿಂತ ನಂತರ ರೈಲಿನಡೆ ಸಿಲುಕಿಕೊಂಡಿದ್ದ ಬಾಲಕನನ್ನು ಸ್ಥಳೀಯರು ಹೊರಗೆ ಎಳೆದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಅಷ್ಟರೊಳಗೆ ಬಾಲಕನ ಎರಡೂ ಕಾಲುಗಳು ತುಂಡಾಗಿದೆ. ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸಾಗರ್ ತಂದೆ ಕೃಷ್ಣ ಕೂಲಿ ಕಾರ್ಮಿಕನಾಗಿದ್ದು, ತಾಯಿ ಲಕ್ಷ್ಮೀ ತರಕಾರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದು, ಸಾಗರ್ ಏಕೈಕ ಪುತ್ರನಾಗಿದ್ದ. ಸರ್ಕಾರಿ ಶಾಲೆಯಲ್ಲಿ 8 ತರಗತಿ ಓದುತ್ತಿದ್ದ. ಘಟನೆ ಬಳಿಕ ಬಾಲಕನ ದೇಹದಲ್ಲಿ ರಕ್ತದ ಕೊರತೆಯುಂಟಾಗಿದ್ದು, ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. 
ಹಳಿಗಳ ಮೇಲೇಕೆ ಆತ ಹೋದ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಪತ್ರಕರ್ತರ ಕಾಲೋನಿಯಲ್ಲಿ ಆತ ಗಾಳಿಪಟ ಬಿಡುತ್ತಿದ್ದ. ಈ ವೇಳೆ ಸಮತೋಲನ ತಪ್ಪಿ ಹಳಿಯ ಮೇಲೆ ಬಿದ್ದಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನೆ ಬಳಿಕ ನಾವು ಸ್ಥಳಕ್ಕೆ ಹೋದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಆತನ ಪರಿಸ್ಥಿತಿ ಬಗ್ಗೆ ವೈದ್ಯರು ಏನನ್ನೂ ಹೇಳುತ್ತಿಲ್ಲ ಎಂದು ಸಾಗರ್ ಚಿಕ್ಕಪ್ಪ ರಮೇಶ್ ಜಾಲಗಾರ್ ಅವರು ಹೇಳಿದ್ದಾರೆ. 
ಘಟನೆ ಕುರಿತಂತೆ ರೈಲ್ವೇ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಹೃದಯವಿದ್ರಾವಕ ಘಟನೆಯಾಗಿದೆ. ಘಟನೆಗೆ ಇಲಾಖೆ ಜವಾಬ್ದಾರಿಯಲ್ಲ. ತರಾತುರಿಯಲ್ಲಿ ಬಾಲಕ ಹಳಿಯ ಮೇಲೆ ಬಂದಿರಬಹುದು. ಇದ್ದಕ್ಕಿದ್ದಂತೆ ರೈಲನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಬಾಲಕನ ಕುರಿತು ಸಂತಾಪ ಸೂಚಿಸುತ್ತೇವೆಂದು ಹೇಳಿದೆ. 
SCROLL FOR NEXT