ಬೆಂಗಳೂರು: ನಟಿ ಸನ್ನಿ ಲಿಯೋನ್ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ. ನಗರದಲ್ಲಿ ನವೆಂಬರ್ 3ರಂದು ಆಯೋಜಿಸಲಾಗಿರುವ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಕನ್ನಡಪರ ಸಂಘಟನೆಗಳ ಬಣ ಹೇಳಿದೆ.
ಬಹುಭಾಷೆಯ ಚಿತ್ರದಲ್ಲಿ ವೀರಮಹಾದೇವಿ ಪಾತ್ರವನ್ನು ಸನ್ನಿ ಲಿಯೋನ್ ನಿರ್ವಹಿಸುತ್ತಿರುವುದು ಕನ್ನಡಪರ ಸಂಘಟನೆಗಳ ವಿರೋಧಕ್ಕೆ ಮುಖ್ಯ ಕಾರಣವಾಗಿದೆ.
ಈ ಕುರಿತು ನಿನ್ನೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಕೆ ಹರೀಶ್, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ, ಆದರೆ ಐತಿಹಾಸಿಕ ಮಹತ್ವದ ಪಾತ್ರವಾದ ವೀರಮಹಾದೇವಿ ಪಾತ್ರವನ್ನು ಆಕೆ ನಿರ್ವಹಿಸುತ್ತಿರುವುದಕ್ಕೆ ನಮ್ಮ ವಿರೋಧವಾಗಿದೆ. ವೀರಮಹಾದೇವಿ ಕನ್ನಡಿಗರ ಪಾಲಿಗೆ ಮಾತೆಯಾಗಿದ್ದು ಅವರ ಪಾತ್ರವನ್ನು ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಮಾಡುತ್ತಿರುವುದು ವೀರಮಹಾದೇವಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಪೊಲೀಸರು ಷರತ್ತಿನ ಒಪ್ಪಿಗೆ ನೀಡಿದ್ದಾರೆ ಎಂದರು. ಈ ತಿಂಗಳ ಆರಂಭದಲ್ಲಿ ನಗರದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸನ್ನಿ ಲಿಯೋನ್ ಪೋಸ್ಟರ್ ನ್ನು ದಹಿಸಿದ್ದರು.
ಕಳೆದ ವರ್ಷ ಡಿಸೆಂಬರ್ 31ರಂದು ಹೊಸ ವರ್ಷಾಚರಣೆಗೆ ಟೈಮ್ ಕ್ರಿಯೇಷನ್ಸ್ ಆಯೋಜಿಸಿದ್ದ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ವ್ಯಾಪಕ ಪ್ರತಿಭಟನೆ ಹಿನ್ನಲೆಯಲ್ಲಿ ಅಂತಿಮ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು.