ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸಿದ್ದ 'ಮಹರ್ಷಿ ವಾಲ್ಮೀಕಿ ಜಯಂತಿ'ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಗೈರು ಹಾಜರಾದ ಹಿನ್ನಲೆಯಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಕಾರ್ಯಕ್ರಮಕ್ಕೆ ಬಾರದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸಮಾಜದ ಮುಖಂಡರು ವೇದಿಕೆಯಲ್ಲಿದ್ದ ಸಿಎಂ ಹಾಗೂ ಡಿಸಿಎಂ ಫೋಟೋಗಳನ್ನು ತೆಗೆದಿಸಿ ಘಟನೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗೈರು ಹಾಜರಿಗೆ ವಾಲ್ಮೀಕಿ ಸಮಾಜದ ಮಠಾಧೀಶರು, ಮುಖಮಂಡರು ವೇದಿಕೆಯಲ್ಲೂ ತೀವ್ರ ಅಸಮಾಧಾ ವ್ಯಕ್ತಪಡಿಸಿದರು.
ಅನಾರೋಗ್ಯದ ಹಿನ್ನಲೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಮುಖ್ಯಮತ್ರಿ ಕುಮಾರಸ್ವಾಮಿ ಆಗಮಿಸಲಿಲ್ಲ. ಜೊತೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಕೂಡ ಬರಲಿಲ್ಲ. ಸಚಿವ ಪ್ರಿಯಾಂಕ್ ಖರ್ಗೆಯವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಬರಲಾಗುವುದಿಲ್ಲ ಎಂದು ಸಮುದಾಯದ ಮಠಾಧೀಶರು ಹಾಗೂ ಮುಖಂಡರ ಗಮನಕ್ಕೆ ತಂದರು. ಆದರೆ, ಉಪ ಮುಖ್ಯಮಂತ್ರಿಗಳೂ ಕೂಡ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬ ವಿಚಾರ ತಿಳಿದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಕಾರ್ಯಕ್ರಮವನ್ನು ಸರ್ಕಾರ ಏಕೆ ಆಯೋಜಿಸಬೇಕಿತ್ತು? ಇದು ನಮ್ಮ ಸಮಾಜಕ್ಕೆ ಹಾಗೂ ವಾಲ್ಮೀಕಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ ಮುಕಂಡರು, ವೇದಿಕೆಯಲ್ಲಿ ವಾಲ್ಮೀಕಿಯ ಫೋಟೋದೊಂದಿಗೆ ಎಲೆಕ್ಟ್ರಾನಿಕ್ ಪರದೆಯಲ್ಲಿ ಹಾಕಲಾಗಿದ್ದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಫೋಟೋ ತೆಗೆಯುವಂತೆ ಒತ್ತಾಯ ಮಾಡಿದರು.
ಇದಕ್ಕೆ ಮಣಿದ ಕಾರ್ಯಕ್ರಮ ಆಯೋಜಕರು ಫೋಟೋಗಳನ್ನು ತೆಗೆದು ಮಹರ್ಷಿ ವಾಲ್ಮೀಕಿಯವರ ಫೋಟೋ ಮಾತ್ರ ಪರದೆ ಮೇಲೆ ಬರುವಂತೆ ಮಾಡಿದರು.
ಬಳಿಕ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಬಳಿಕ ಕೂಡ ಬ್ಯಾಂಕ್ವೆಟ್ ಹಾಲ್'ನ ಹೊರಗೆ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ವಾಗ್ವಾದಕ್ಕಿಳಿದ ಸಮುದಾಯದ ಕೆಲ ಮುಖಂಡರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ವೈಯಕ್ತಿಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ಗೌರವವಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತ ಕಾಯುವುದಾಗಿ ಹೇಳಿದ್ದರು. ಅವರಿಗೆ ನಮ್ಮ ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಬೇಕಿತ್ತು. ಆದರೆ, ಅವರು ಕಾರ್ಯಕ್ಕೆ ಬಾರದೇ ಇರುವುದು ಬೇಸರವನ್ನುಂಟು ಮಾಡಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಪ್ರಸನ್ನಾನಂದಪುರಿಯವರು ಹೇಳಿದ್ದಾರೆ.