ಬೆಂಗಳೂರು: ಬಾಡಿಗೆಗೆ ಸಂಚಾರಿ ಪೊಲೀಸರ ಸಮವಸ್ತ್ರಗಳನ್ನು ಖರೀದಿಸಿ, ಸಂಚಾರಿ ಪೊಲೀಸರ ಸೋಗಿನಲ್ಲಿ ರಸ್ತೆಗಳಲ್ಲಿ ನಿಲ್ಲುತ್ತಿರುವ ತಂಡವೊಂದು ಜನರಲ್ಲಿ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಜನರು ಎಚ್ಚರದಿಂದಿರಬೇಕಿದೆ.
ನಗರದ ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ನಗರದ ಗೋಪಾಲನ್ ಮಾಲ್ ಬಳಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿ ಹೋಗಿದೆ.
ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬನ ಬಳಿ ವಸೂಲಿ ಮಾಡುತ್ತಿರುವ ವಿಡಿಯೋವೊಂದು ಇದೀಗ ಪೊಲೀಸರ ಕೈಸೇರಿದೆ.
ಆರ್'ಆರ್ ನಗರ ರಸ್ತೆಯಲ್ಲಿ ತೆರಳುತ್ತಿದ್ದ 45 ವರ್ಷದ ಆಟೋ ಚಾಲಕನೊಬ್ಬನನ್ನು ತಡೆದ ನಕಲಿ ಪೊಲೀಸ್ ಹಣವನ್ನು ಕೇಳಿದ್ದಾನೆ. ಈ ವೇಳೆ ಆಟೋ ಚಾಲಕ ಹಣವಿಲ್ಲ ಎಂದಾಗ ಆಟೋ ಒಳಗೆ ಕುಳಿತ ನಕಲಿ ಪೊಲೀಸ್, ರೂ.100 ನೀಡದಿದ್ದರೆ, ಆಟೋದಿಂದ ಕೆಳಗಿಳಿಯುವುದಿಲ್ಲ ಎಂದು ಹೇಳಿದ್ದಾರೆ.
ಘಟನೆಯ ವಿಡಿಯೋವನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರಿಗೆ ಕಳುಹಿಸಿದ ಬಳಿಕ ಪೊಲೀಸರಿಗೆ ಶಾಕ್ ಆಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ನಕಲಿ ಪೊಲೀಸ್ ಅಧಿಕಾರಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಈ ನಕಲಿ ಪೊಲೀಸರು ದ್ವಿಚಕ್ರ ವಾಹನ ಸವಾರರ ಬಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಇಂತಹ ಕಳ್ಳರಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಕಳ್ಳರು ಮಾಲ್'ಗೆ ಬರುವ ಜನರನ್ನು ಗುರಿ ಮಾಡುತ್ತಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸರಂತೆ ನಟಿಸುವ ನಕಲಿ ಪೊಲೀಸರ ಜಾಲಕ್ಕೆ ಜನರು ಬೀಳಬಾರದು. ಸಂಚಾರಿ ನಿಮಯ ಉಲ್ಲಂಘಿಸಿದ್ದರೂ ತಪಾಸಣೆ ನಡೆಸಲು ಬರುವ ಪೊಲೀಸರ ಐಡಿಯನ್ನು ಜನರು ಪರಿಶೀಲಿಸಬೇಕು. ಸಮವಸ್ತ್ರದಲ್ಲಿರುವವರು ಯಾರೇ ಬಂದರೂ ಸುಮ್ಮನೆ ಹಣವನ್ನು ನೀಡಬಾರದು, ದಂಡವನ್ನು ಪರಿಶೀಲಿಸಿದ ಬಳಿಕವಷ್ಟೇ ಹಣವನ್ನು ನೀಡಬೇಕು. ಹಣ ನೀಡಿದ ಬಳಿಕ ದಂಡ ಕಟ್ಟಿದ್ದಕ್ಕೆ ಟಿಕೆಟ್ ಕೇಳಬೇಕು. ಪೊಲೀಸರಿಗೆ ಲಂಚವನ್ನು ನೀಡಬಾರದು ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡುವ ದ್ವಿಚಕ್ರ ವಾಹನ ಸವಾರರು ಯಾವುದನ್ನು ಪರಿಶೀಲನೆ ನಡೆಸದೆಯೇ ಕೇಳಿದಷ್ಟು ಹಣವನ್ನು ನೀಡಿ ಹೋಗುತ್ತಾರೆ. ವ್ಯಕ್ತಿಯೊಬ್ಬ ದಂಡದ ಹಣವೆಂದು ರೂ.800 ಕಟ್ಟಿದ್ದಾನೆ. ಆದರೆ, ಸೂಕ್ತ ಸ್ಥಳಕ್ಕೆ ಆ ಹಣ ತಲುಪಿಲ್ಲ. ನಿಯಮ ಉಲ್ಲಂಘನೆ ಮಾಡುವ ಸವಾರರನ್ನು ಸಂಚಾರಿ ಪೊಲೀಸರು ಠಾಣೆಗೆ ಕರೆದೊಯ್ದು ದಂಡದ ಹಣವನ್ನು ಕಟ್ಟಿಸಿ, ಅದಕ್ಕೆ ಚೀಟಿಯನ್ನು ನೀಡುತ್ತಾರೆ. ದಂಡದ ಹಣವನ್ನು ಸಂಚಾರಿ ಪೊಲೀಸರು ರದ್ದು ಮಾಡಲು ಸಾಧ್ಯವೇ ಇಲ್ಲದ. ಅದು ಕೇವಲ ನ್ಯಾಯಾಲಯದ ಕೈಯಲ್ಲಿರುತ್ತದೆ. ದಂಡದ ಹಣವನ್ನು ರದ್ದು ಮಾಡುತ್ತೇನೆಂದು ಅಲ್ಪ ಹಣವನ್ನು ತೆಗೆದುಕೊಳ್ಳುವ ಪೊಲೀಸರನ್ನು ನಕಲಿ ಪೊಲೀಸರೆಂದು ಈ ಮೂಲಕವಾದರೂ ಕಂಡು ಹಿಡಿಯಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics