ಬೆಂಗಳೂರು: ಭಾರತದ ವಾಯುಯಾನ ದೈತ್ಯ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಗೆ ನೂತನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ನೇಮಕವಾಗಿದೆ. ಆರ್. ಮಾಧವನ್ ಎಚ್ಎಎಲ್ ನ ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಆಗಿದ್ದಾರೆ.
ಟಿ. ಸುವರ್ಣ ರಾಜು ಸ್ಥಾನಕ್ಕೆ ಮಾಧವನ್ ನೇಮಕವಾಗಿದ್ದು ಮುಂದಿನ ಐದು ವರ್ಷಗಳ ಅವಧಿಗೆ ಮಾಧವನ್ ಎಚ್ಎಎಲ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಇದಕ್ಕೆ ಮುನ್ನ ಮಾಧವನ್ ಲಖನೌ ನಲ್ಲಿ ಎಚ್ಎಎಲ್ ಪರಿಕರಗಳ (ಆಕ್ಸಸರೀಸ್) ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಮಾಧವನ್ "ಏರೋಸ್ಪೇಸ್ ಉದ್ಯಮದಲ್ಲಿ ಎಚ್ಎಎಲ್ ಅಗ್ರ ಸ್ಥಾನದಲ್ಲಿದ್ದು ಈ ಸ್ಥಾನವನ್ನು ಕಾಪಾಡಿಕೊಂಡು ಹೋಗಬೇಕಿದೆ. ದೇಶೀಯ ಸರಕನ್ನು ಬಳಸಿ ವಿಶ್ವದರ್ಜೆಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪೂರೈಸುವುದು ನನ್ನ ಉದ್ದೇಶವಾಗಿದೆ" ಎಂದಿದ್ದಾರೆ.
ವೈಮಾನಿಕ ಕ್ಷೇತ್ರದಲ್ಲಿ ಸಂಸ್ಥೆಯ ಉನ್ನತಿಯ ಸಂಬಂಧ ನಾವು ಕೆಲಸ ಮಾಡುತ್ತಿದ್ದು "ಎಲ್ಲಾ ಪಾಲುದಾರರ ಬೆಂಬಲ, ಸಹಭಾಗಿತ್ವವು ಸಂಸ್ಥೆಯ ಭವಿಷ್ಯದ ಏಳ್ಗೆಗೆ ಮುಖ್ಯವಾಗಿದೆ" ಎಂದರು.
ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಮಾಧವನ್ ರಾಯಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದಾರೆ.ಐಐಅಟಿ ಮದ್ರಾಸ್ ನಲ್ಲಿ ಇವರು ಎಂ.ಟೆಕ್ ಪದವಿ ಪೂರೈಸಿದ್ದಾರೆ.
1982ರಲ್ಲಿ ಮಾಧವನ್ ಮ್ಯಾನೇಜ್ಮೆಂಟ್ ಟ್ರೇನೀ ಆಗಿ ಎಚ್ಎಎಲ್ ಗೆ ಸೇರಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics