ಬೆಂಗಳೂರು: ಅಗ್ನಿ ಅವಘಡ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆ ನಗರ ಸೇರಿದಂತೆ ಹಲವು ಮಾಲ್ ಗಳ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು. ಈ ವೇಳೆ 44 ಮಾಲ್ ಗಳ ಪೈಕಿ 24 ಮಾಲ್ ಗಳು ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ.
ದಾಳಿ ವೇಳೆ ನಿರ್ಲಕ್ಷ್ಯವಹಿಸಿದ್ದ 11 ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, 3 ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದಿದ್ದರೆ, ಅಂತಹ ಮಾಲ್ ಹಾಗೂ ಕಟ್ಟಡಗಳಿಗೆ ನೀರು, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಅಗ್ನಿಶಾಮಕ, ತುರ್ತು ಸೇವೆ ಇಲಾಖೆ ಎಡಿಜಿಪಿ ಸುನೀಲ್ ಅಗಲ್ ವಾರ್ ಅವರು, ಬೆಂಗಳೂರಿನ ಜಾಲಹಳ್ಳಿಯ ರಾಕ್'ಲೈನ್ ಮಾಲ್, ಯಶವಂತಪುರದ ವೈಷ್ಣವಿ, ವೇಗಾ ಸಿಟಿ ಮಾಲ್, ಹುಳಿಮಾವು ರಾಯಲ್ ಮೀನಾಕ್ಷಿ ಮಾಲ್, ರಾಜಾಜಿನಗರದ ಗೋಲ್ಡನ್ ಹೈಟ್ಸ್, ಸರ್ಜಾಪುರದ ಸೆಂಟ್ರಲ್ ಮಾಲ್, ಬ್ರಾಂಡ್ ಫ್ಯಾಕ್ಟರಿ, ಹಲಸೂರಿನ ಲಿಡೋಮಾಲ್, ಡಿಮಾರ್ಕೆಟ್ ಸಿಟಿಯಲ್ಲಿ ದಾಳಿ ನಡೆಸಲಾಗಿಯಿತು. ಅವಘಡ ಸಂಭವಿಸಿದ ವೇಳೆ ಬಳಸುವ ಸ್ಥಳವನ್ನು ವಾಹನಗಳ ಪಾರ್ಕಿಂಗ್, ಸಣ್ಣ ಮಳಿಗೆ, ಸರಕು ಸಾಗಣೆ ಕೊಠಡಿಯನ್ನಾಗಿ ಮಾಡಿಕೊಂಡಿರುವುದು ಕಂಡುಬಂದಿದೆ.
ಇದರಿಂದಾಗಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನ ಹೋಗಲು ಸಾಧ್ಯವಾಗುವುದಿಲ್ಲ. ಮೂರು ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳದಿದ್ದರೆ ವಿದ್ಯುತ್ ಹಾಗೂ ನೀರು ಪೂರೈಕೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಲ ವಾಣಿಜ್ಯ ಕಟ್ಟಡ, ಮಾಲ್ ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಅಗ್ನಿ ಅವಘಡದ ಬಗ್ಗೆ ಪದೇ ಪದೇ ನಿಯಮ ಉಲ್ಲಂಘಿಸುತ್ತಿದ್ದು, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ. ಅಗ್ನಿಶಾಮಕ ಮತ್ತು ತುರ್ತು ಇಲಾಖೆಯಲ್ಲಿ ಕೆಲವೊಂದು ನಿಯಮ ಬದಲಾಗಬೇಕಿದೆ. ಉಲ್ಲಂಘಿಸುವ ಕಟ್ಟಡಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.