ರಾಜ್ಯ

ಆರ್ ಎಸ್ಎಸ್ ಬಹುಮುಖ ರಾಕ್ಷಸ, ಸನಾತನ ಸಂಸ್ಥೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿ: ಸ್ವಾಮಿ ಅಗ್ನಿವೇಶ್

Srinivasamurthy VN
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ಬಹುಮುಖ ರಾಕ್ಷಸ ಸಂಸ್ಥೆಯಾಗಿದ್ದು, ಅದರ ಅಂಗ ಸಂಸ್ಥೆಯಾದ ಸನಾತನ ಸಂಸ್ಥೆಯನ್ನು ಕೂಡಲೇ ಉಗ್ರ ಸಂಘಟನೆ ಎಂದು ಘೋಷಣೆ ಮಾಡಬೇಕು ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.
ನಗರದಲ್ಲಿ ನಿನ್ನೆ ನಡೆದ ಗೌರಿ ಲಂಕೇಶ್ ಅವರ ಪುಣ್ಯತಿಥಿಯ ವಿಶೇಷ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಆರ್ ಎಸ್‌ಎಸ್‌ ಎಂದರೆ ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ದೇಶಾದ್ಯಂತ ಅದರ ಅಸ್ತಿತ್ವ ಇದೆ. ಅದರ ನಾಯಕ ಹಿಟ್ಲರ್‌. ಈ ಸಂಘಟನೆಯ ನಾಯಕರೆಲ್ಲಾ ಅದೇ ತತ್ವವನ್ನು ಪಾಲಿಸುವವರಾಗಿದ್ದಾರೆ. ಆರ್ ಎಸ್‌ಎಸ್ ನದ್ದು ರಾಜಕೀಯ ಹಿಂದುತ್ವ' ಎಂದು ಸ್ವಾಮಿ ಅಗ್ನಿವೇಶ್‌ ಹೇಳಿದರು.
'ಹಿಂದೂಗಳ ಏಕತೆ ಬಗ್ಗೆ ಮಾತನಾಡುವ ಇವರಿಗೆ ದಾಭೋಲ್ಕರ್‌, ಪನ್ಸಾರೆ, ಪ್ರೊ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರಾರೂ ಹಿಂದೂಗಳಾಗಿ ಕಾಣಲಿಲ್ಲವೇ. ಆರ್ ಎಸ್‌ಎಸ್ ನ ಬಹುಮುಖಿ ಸಂಸ್ಥೆಗಳಲ್ಲಿ ಸನಾತನ ಸಂಸ್ಥೆಯೂ ಒಂದು. ಅದು ಸಾಮಾನ್ಯ ಧರ್ಮ ಪ್ರಚಾರಕ ಸಂಸ್ಥೆ ಅಲ್ಲ. ಅದೊಂದು ಭಯೋತ್ಪಾದನಾ ಸಂಸ್ಥೆ. ಅದರ ಮೇಲೆ ಸರ್ಕಾರ ನಿಗಾ ಇಡಬೇಕು. ಅಲ್ಲದೆ ಅದನ್ನು ಕೂಡಲೇ ಉಗ್ರ ಸಂಘಟನೆ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. 
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಕಿಡಿಕಾರಿದ ಅಗ್ನಿವೇಶ್, 'ನಾನು ಕೂಡ ಹಿಂದೂ.. ಸನ್ಯಾಸಿಯಾದ ನನ್ನ ಮೇಲೆ ಹಲ್ಲೆ ನಡೆದಾಗ ನೀವೇಕೆ ಒಂದೂ ಮಾತಾಡಲಿಲ್ಲ. ನಿಮ್ಮ ಮೌನ ನೋಡಿದರೆ ಇಂಥಹ ದುಷ್ಟ ಘಟನೆಗಳಿಗೆ ನೀವೇ ಹೊಣೆ' ಅಗ್ನಿವೇಶ್ ಆರೋಪಿಸಿದರು. 
SCROLL FOR NEXT