ರಾಜ್ಯ

ಪಿಎಲ್ ಡಿ ಬ್ಯಾಂಕಿನ ಸಾಲಮನ್ನಾ ಪ್ರಸ್ತಾವ ಇಲ್ಲ- ಬಂಡೆಪ್ಪ ಕಾಶಂಪೂರ್ !

Nagaraja AB

ಬೆಂಗಳೂರು: ಪ್ರಾಥಮಿಕ ಸಹಕಾರ ಕೃಷಿ ಹಾಗೂ  ಗ್ರಾಮೀಣ  ಅಭಿವೃದ್ದಿ ಬ್ಯಾಂಕಿನಲ್ಲಿ  (ಪಿಎಲ್ ಡಿ) ಸಾಲ ಪಡೆದಿರುವ ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಈ ಬ್ಯಾಂಕುಗಳು ಈವರೆಗೂ ಯಾವುದೇ ಬೆಳೆ ಸಾಲ ನೀಡಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್  ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಲ್ ಡಿ ಬ್ಯಾಂಕಿನಿಂದ ಪಡೆದಿರುವ ರೈತರ ಸಾಲ ಮನ್ನಾ ಮಾಡಲು ಎರಡನೇ ಹಂತದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು  ತಿಳಿಸಿದರು.

ರಾಜ್ಯದಲ್ಲಿನ ಒಟ್ಟಾರೇ 75 ಲಕ್ಷ ರೈತರ ಪೈಕಿ 15 ಲಕ್ಷ ರೈತರನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯಾಪ್ತಿಯೊಳಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ ಸಚಿವರು, ರೈತ ಕುಟುಂಬದ ಸದಸ್ಯರೊಬ್ಬರಿಗೆ ಕೇವಲ 1 ಲಕ್ಷ ರೂ ಸಾಲಮನ್ನಾ  ಸವಲತ್ತು  ಒದಗಿಸುವ ಷರತ್ತನ್ನು ಸರ್ಕಾರ ಇನ್ನೂ ಹಿಂದಕ್ಕೆ ಪಡೆದಿಲ್ಲ ಎಂದರು. ಈ ಷರತ್ತಿಗೆ ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

 ಹೈದ್ರಾಬಾದ್ ಕರ್ನಾಟಕ ವಲಯದ ಅಭಿವೃದ್ದಿ ಮಂಡಳಿ ಬಲವರ್ಧನೆಗಾಗಿ ಎಲ್ಲಾ ಸಚಿವರು ಗಂಭೀರವಾಗಿ ಚರ್ಚೆ ನಡೆಸಿರುವುದಾಗಿ ಹೇಳಿದ ಬಂಡೆಪ್ಪ ಕಾಶಂಪೂರ್  ರಾಜ್ಯಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

SCROLL FOR NEXT