ರಾಜ್ಯ

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುತ್ತಿರುವ ಸರ್ಕಾರಿ ಕಾಲೇಜಿನ ಕ್ಲರ್ಕ್

Sumana Upadhyaya

ಕಲಬುರಗಿ: ಸಮಾಜ ಸೇವೆ ಯಾವ ರೀತಿಯಲ್ಲಾದರೂ ಮಾಡಬಹುದು. ಇಲ್ಲೊಬ್ಬ ಸಮಾಜ ಸೇವಕರಿದ್ದಾರೆ. ವೃತ್ತಿಯಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಕ್ಲರ್ಕ್ ಆಗಿದ್ದಾರೆ. ಅವರು ಮಾಡುತ್ತಿರುವ ಕೆಲಸ ಕೇಳಿದರೆ ಎಂತವರೂ ಮೆಚ್ಚುವಂತದ್ದು.

ಕಲಬುರಗಿಯಲ್ಲಿ ಜೂನಿಯರ್ ಕಾಲೇಜಿನಲ್ಲಿ ಮೊದಲ ದರ್ಜೆ ಸಹಾಯಕರಾಗಿರುವ ಬಸವರಾಜ್ ಮಂಟಗೆ ಹೆಣ್ಣು ಮಕ್ಕಳಿಗೆ ಹೈಸ್ಕೂಲ್ ಮತ್ತು ಪದವಿ ಪೂರ್ವ ಶಿಕ್ಷಣಕ್ಕೆ ಧನ ಸಹಾಯ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಪುಸ್ತಕ, ಪೆನ್ನು ಮತ್ತು ಇತರ ಸಾಮಗ್ರಿಗಳನ್ನು ಉಚಿತವಾಗಿ ಪೂರೈಸುತ್ತಾರೆ.ಅಲ್ಲದೆ ಈ ವರ್ಷದಿಂದ ಪಿಯುಸಿಗೆ ಸೇರುವ ಎಲ್ಲಾ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಸವರಾಜ್ 70 ಹೆಣ್ಣು ಮಕ್ಕಳ ಪ್ರವೇಶಕ್ಕೆ ಒಟ್ಟು 20 ಸಾವಿರ ರೂಪಾಯಿಗಳನ್ನು ಕಾಲೇಜಿನ ಪ್ರಾಂಶುಪಾಲರಿಗೆ ನೀಡಿದ್ದಾರೆ. ಮುಂದಿನ ವರ್ಷ ಕೂಡ 70 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಪಿಯುಸಿ ಮೊದಲ ವರ್ಷದ ಪ್ರವೇಶ ಪಡೆಯುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಣ ಪೂರೈಸುವುದಾಗಿ ತಿಳಿಸಿದ್ದಾರೆ.
ಧನೇಶ್ವರಿ ಮತ್ತು ಭುವನೇಶ್ವರಿ ಎಂಬ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಬಸವರಾಜ್ ಮಂಟಗೆ ದಂಪತಿಯ ಮೊದಲ ಪುತ್ರಿ ಕಳೆದ ವರ್ಷ ಅನಾರೋಗ್ಯದಿಂದ ನಿಧನರಾದರು. ತಮ್ಮ ಮಗಳ ಅಗಲುವಿಕೆಯ ನೋವನ್ನು ಅರಗಿಸಿಕೊಳ್ಳಲು ಕೆಲವು ತಿಂಗಳುಗಳೇ ಅವರಿಗೆ ಬೇಕಾಯಿತಂತೆ. ನಂತರ ಮಗಳ ನೆನಪಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಇದಕ್ಕೆ ಅವರ ಪತ್ನಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವವರು ಕೂಡ ಸಹಮತಿ ನೀಡಿದ್ದಾರೆ. ಹೀಗಾಗಿ ದಂಪತಿ ತಮ್ಮ ಹಿರಿಯ ಪುತ್ರಿ ಹೆಸರಿನಲ್ಲಿ ಕಲಬುರಗಿಯ ಪದವಿಪೂರ್ವ ಸರ್ಕಾರಿ ಕಾಲೇಜಿಗೆ ಸೇರುವ ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳಿಗೆ ನೀಡುತ್ತಾರೆ.

ಈ ಬಗ್ಗೆ ಮಾತನಾಡಿದ ಬಸವರಾಜ್ ಮಂಟಗೆ, ನಾನು ಆರ್ಥಿಕವಾಗಿ ಹಿಂದುಳಿದ ವರ್ಗದಿಂದ ಬಂದವನು, ನಾನು ಓದುತ್ತಿರುವಾಗ ಕಾಲಿಗೆ ಚಪ್ಪಲಿ ಕೂಡ ಹಾಕಿಕೊಳ್ಳಲು ನಮ್ಮ ತಂದೆ ತಾಯಿ ಬಳಿ ಹಣವಿರಲಿಲ್ಲ. ನಾನು ಇದೇ ಶಾಲೆಯಲ್ಲಿ ಹೈಸ್ಕೂಲ್, ಕಾಲೇಜು ಓದಿದ್ದು ಮತ್ತು ಕೆಲಸ ಮಾಡುತ್ತಿರುವುದು. ಅದಕ್ಕೆ ಕೃತಜ್ಞತೆಯಾಗಿ ನನ್ನ ಕೈಲಾದ ಸೇವೆ ಸಲ್ಲಿಸುತ್ತೇನೆ ಎಂದರು.

ಧನೇಶ್ವರಿ ಟ್ರಸ್ಟ್: ತಮ್ಮ ಮಗಳ ಹೆಸರಿನಲ್ಲಿ ಟ್ರಸ್ಟ್ ರಚಿಸಲು ಬಸವರಾಜ್ ಊರ ಜನರ ಒತ್ತಾಸೆಯಂತೆ ಯೋಚಿಸುತ್ತಿದ್ದು ಇದರಿಂದ ಇನ್ನಷ್ಟು ಸಮಾಜ ಸೇವೆ ಮಾಡಬಹುದು ಎಂಬುದು ಅವರ ಯೋಜನೆಯಾಗಿದೆ.

SCROLL FOR NEXT