ಬೆಂಗಳೂರು: ವೇಗವಾಗಿ ಬಂದ ಶಾಲಾ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅತ್ತಿಬೆಲೆ ವೃತ್ತದ ಬಳಿಯ ಬಿದರಕಲ್ಲಿನ ಬಳಿ ನಡೆದಿದೆ.
ಮೃತರನ್ನು ಮಂಜುನಾಥ್ (40) ಹಾಗೂ ಆತನ ಸ್ನೇಹಿತ ಶ್ರೀನಾಥ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮಿಳುನಾಡಿನ ಟಿ. ಹೊಸಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಅನೇಕಲ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಚೇರಿಗೆ ಬರಲು ಅನೇಕಲ್ ಕಡೆಗೆ ಬರುತ್ತಿದ್ದಾಗ ನಿನ್ನೆ ಬೆಳಿಗ್ಗೆ 7-30ರ ಸುಮಾರಿನಲ್ಲಿ ಅಪಘಾತ ನಡೆದಿದೆ ವೇಗವಾಗಿ ಬಂದ ನಾರಾಯಣ ಶಾಲೆಯ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಆ ಬಸ್ ನಲ್ಲಿ ಮಕ್ಕಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಲಕನ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣವಾಗಿದೆ. ಅಪಘಾತದ ನಂತರ ಬಸ್ ಚಾಲಕ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ. ಬಸ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.