ಬೆಂಗಳೂರು: ನಗರದ ರಸ್ತೆ ಗುಂಡಿ ಸಂಬಂಧಿಸಿದಂತೆ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿದ ಹಿನ್ನಲೆಯಲ್ಲಿ ಗುರುವಾರ ರಾತ್ರಿ ವೇಳೆ 1,655 ಗುಂಡಿಗಳನ್ನು ಮುಚ್ಚಲಾಗಿದೆ.
ನಗರದಲ್ಲಿ ಒಟ್ಟು 3,071 ರಸ್ತೆ ಗುಂಡಿ ಗುರುತಿಸಲಾಗಿದ್ದು, ಅದರಲ್ಲಿ ಈ ವರೆಗೆ 1,655 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ ಎಂದು ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ವೇಳೆ ನ್ಯಾಯಾಲಯ ಸೋಮವಾರದೊಳಗೆ ಎಲ್ಲಾ ಗುಂಡಿಗಳನ್ನು ಭರ್ತಿ ಮಾಡಬೇಕೆಂದು ಬಿಬಿಎಂಪಿಗೆ ಆದೇಶಿಸಿದೆ.
ನ್ಯಾಯಾಲಯ ನೀಡಿರುವ ಮಾಹಿತಿ ಹೊರತು ಪಡಿಸಿ ಗುರುವಾರ ರಾತ್ರಿ ವೇಳೆಗೆ ಹೆಚ್ಚುವರಿಯಾಗಿ 260 ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಬಂದಿದ್ದರಿಂದ ಗುಂಡಿ ಭರ್ತಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯಾಯಾಲಯದ ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಬಿಬಿಎಂಪಿ ಆಯುಕ್ತರು, ಜಲಮಂಡಳಿ, ಬೆಸ್ಕಾಂ, ಬಿಡಿಎ ಸಂಸ್ಥೆ ಸೇರಿದಂತೆ ನಗರದ ವಿವಿಧ ಸಂಸ್ಥೆಗಳು ರಸ್ತೆ ಗುಂಡಿ ಮುಚ್ಚುವುದಕ್ಕೆ ಸಹಕರಿಸುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಅಲ್ಲದೇ ರಸ್ತೆ ನಿರ್ವಹಣೆ ಅವಧಿ ಬಾಕಿ ಇರುವ ಗುತ್ತಿಗೆದಾರರು ರಸ್ತೆ ಗುಂಡಿ ಮುಚ್ಚುವುದಕ್ಕೆ ಮುಂದಾಗಬೇಕೆಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.