ರಾಜ್ಯ

ಇತಿಹಾಸದ ಪುಟ ಸೇರಿದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ

Manjula VN
ಮೈಸೂರು: ಕನ್ನಡ, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಮೈಸೂರಿನ ಹೆಮ್ಮೆಯ ಪ್ರೀಮಿಯರ್ ಸ್ಟುಡಿಯೋ ಇದೀಗ ಇತಿಹಾಸ ಪುಟ ಸೇರಿದೆ. 
ನಿನ್ನೆಯಷ್ಟೇ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಪ್ರೀಮಿಯರ್ ಸ್ಟುಡಿಯೋ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. 
ಪ್ರೀಮಿಯರ್ ಸ್ಟುಡಿಯೋ ದಕ್ಷಿಣ ಭಾರತದಲ್ಲಿಯೇ ಸಿನಿಮಾ ಚಿತ್ರೀಕರಣಕ್ಕಾಗಿ ಹೆಸರುವಾಸಿಯಾಗಿತ್ತು. ದೇಶದ ವಿವಿಧ ಭಾಷೆಗಳು ಮಾತ್ರವಲ್ಲದೇ ಇಟಲಿ ಹಾಗೂ ಇಂಗ್ಲಿಷ್'ನ ಕೆಲ ಸಿನಿಮಾಗಳ ಒಳಾಂಗಣ ಚಿತ್ರೀಕರಣಗಳೂ ಇಲ್ಲಿ ನಡೆದಿತ್ತು. 
ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ನಿರ್ಮಾಣಗೊಂಡಿದ್ದವು. ಈ ಮೂಲಕ ಪ್ರೀಮಿಯರ್ ಸ್ಟುಡಿಯೋ ಸಾವಿರಾರು ಮಂದಿಯ ಜೀವನೋಪಾಯಕ್ಕೆ ನೆರವಾಗಿತ್ತು. 
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಜನಿಕಾಂತ್, ಅಮಿತಾಭ್ ಬಚ್ಚನ್, ಎಂ.ಜಿ.ರಾಮಚಂದ್ರನ್, ಕಮನ್ ಹಾಸನ್, ಜಯಲಲಿತಾ ಸೇರಿ ಅನೇಕ ಘಟನುಘಟಿ ನಟ, ನಟಿಯರ ಅನೇಕ ಸಿನಿಮಾಗಳ ಚಿತ್ರೀಕರಣದಲ್ಲಿ ನಡೆದಿದ್ದವು. 
1988ರಲ್ಲಿ ಸಂಜಯ್ ಖಾನ್ ಅವರು 'ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್' ಹಿಂದಿ ಧಾರಾವಾಹಿ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಟ ಈ ಸ್ಟುಡಿಯೋದ ಭವಿಷ್ಯವನ್ನೇ ಬದಲಾಯಿಸಿ ಬಿಟ್ಟಿತ್ತು. ಘಟನೆಯಲ್ಲಿ 61 ಮಂದಿ ತಂತ್ರಜ್ಞರು, ಕಲಾವಿದರು ಸುಟ್ಟು ಕರಕಲಾಗಿದ್ದರು. ಈ ಆಘಾತದ ಬಳಿಕ ಸ್ಟುಡಿಯೋ ಮಾಲೀಕರಿಗೆ ಭಾರೀ ನಷ್ಟ ಉಂಟಾಗಿತ್ತು. ಅಲ್ಲದೆ, ಸ್ಟುಡಿಯೋದಲ್ಲಿ ಸಿನಿಮಾಗಳ ಚಿತ್ರೀಕರಣವೂ ಬಹುತೇಕ ಕಡಿಮೆಯಾಗತೊಡಗಿದ್ದವು. 
SCROLL FOR NEXT