ರಾಜ್ಯ

ಇಟಲಿಯಲ್ಲಿರುವ ಗರ್ಲ್ ಫ್ರೆಂಡ್ ಜೊತೆ ಹೋಗಲು ಪತ್ನಿ ಹತ್ಯೆಗೇ ಸುಪಾರಿ ಕೊಟ್ಟ ಕಾನ್ಸ್ಟೇಬಲ್; ಬಂಧನ

Sumana Upadhyaya

ಶಿವಮೊಗ್ಗ: ಇಟಲಿಯಲ್ಲಿ ವಾಸಿಸುತ್ತಿರುವ ಗೆಳತಿ ಜೊತೆ ಓಡಿ ಹೋಗಲು ಪತ್ನಿಯನ್ನು ಕೊಲ್ಲಲು ತನ್ನ ಗ್ಯಾಂಗ್ ನವರಿಗೆ ಸುಪಾರಿ ನೀಡಿದ ಆರೋಪದ ಮೇಲೆ ಶಿವಮೊಗ್ಗ ಪೊಲೀಸರು ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ನ್ನು ಬಂಧಿಸಿದ್ದಾರೆ.

ಸುಪಾರಿ ಪಡೆದ ಗ್ಯಾಂಗ್ ನ ಸದಸ್ಯರು ನಂತರ ಮನಸ್ಸು ಬದಲಿಸಿ ಪೊಲೀಸ್ ಅಧಿಕಾರಿಯ ಪತ್ನಿಯನ್ನು ಕೊಲ್ಲುವ ಯೋಜನೆಯನ್ನು ಬಿಟ್ಟರು.

ಆರೋಪಿ ಹೆಡ್ ಕಾನ್ಸ್ಟೇಬಲ್ ರವೀಂದ್ರನಾಥ ಗಿರಿ ಗ್ಯಾಂಗ್ ನ ಸದಸ್ಯರಿಗೆ ಹಣ ಕೊಟ್ಟು ತನ್ನ ಪತ್ನಿಯನ್ನು ಹತ್ಯೆ ಮಾಡುವಂತೆ ಒಪ್ಪಂದ ಮಾಡಿಕೊಂಡಿದ್ದನು. ಗಿರಿ ಇಟಲಿಯಲ್ಲಿರುವ ತನ್ನ ಸ್ನೇಹಿತೆ ಜೊತೆ ಸಂಪರ್ಕದಲ್ಲಿದ್ದನು ಮತ್ತು ಅಲ್ಲಿಗೆ ಹೋಗಿ ನೆಲೆಸಲು ಯೋಜಿಸುತ್ತಿದ್ದನು. ಆತನ ಪತ್ನಿಗೆ ಈ ವಿಷಯ ತಿಳಿದು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಹೀಗಾಗಿ ಪತ್ನಿಯನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ. ಆರೋಪಿಗಳಾದ ಫಿರೋಜ್ ಖಾನ್, ಸೊಹಾಲಿ ಮತ್ತು ಇರ್ಫಾನ್ ಎಂಬುವವರಿಗೆ 5 ಲಕ್ಷ ರೂಪಾಯಿ ನೀಡಲು ಒಪ್ಪಂದ ಕೂಡ ಮಾಡಿದ್ದು ಅದರಲ್ಲಿ 20 ಸಾವಿರ ರೂಪಾಯಿ ಅಡ್ವಾನ್ಸ್ ನೀಡಿದ್ದ. ಸುಪಾರಿ ಪಡೆದವರು ಮಹಿಳೆಯನ್ನು ಹತ್ಯೆ ಮಾಡಲು 3 ಬಾರಿ ಪ್ರಯತ್ನಿಸಿದ್ದರು. ಆದರೆ ಕೊನೆಗೆ ಆಕೆಯ 8 ವರ್ಷದ ಮಗನ ಮುಖವನ್ನು ನೋಡಿ ಕನಿಕರದಿಂದ ಹತ್ಯೆ ಮಾಡುವ ಯೋಜನೆಯನ್ನು ಕೈಬಿಟ್ಟರು ಎನ್ನುತ್ತಾರೆ ಎಸ್ಪಿ ಅಭಿನವ್ ಖಾರೆ.

ಮೂರನೇ ಬಾರಿ ಮಹಿಳೆಯನ್ನು ಕೊಲ್ಲಲು ಸಂಚು ನಡೆಸಿ ಹಿಂತಿರುಗುತ್ತಿದ್ದಾಗ ಆರೋಪಿಗಳನ್ನು ಪೊಲೀಸರು ಹಿಡಿದರು ಎಂದು ಒಂದು ಮೂಲಗಳು ಹೇಳಿದರೆ ಮತ್ತೊಂದು ಮೂಲಗಳಿಂದ ಬಂದ ವರದಿ ಪ್ರಕಾರ ಗ್ಯಾಂಗ್ ಪೊಲೀಸರ ಬಳಿಗೆ ಹೋಗಿ ಶರಣಾದರು ಎನ್ನುತ್ತದೆ. ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

SCROLL FOR NEXT