ರಾಜ್ಯ

ಶುಲ್ಕ, ಸೌಲಭ್ಯ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

Sumana Upadhyaya
ಬೆಂಗಳೂರು: ರಾಜ್ಯಾದ್ಯಂತ ಇರುವ ಖಾಸಗಿ ಶಾಲೆಗಳು ತಮ್ಮ ಶುಲ್ಕ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಮತ್ತು ಅದರ ಪ್ರತಿಯೊಂದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳು ತಮ್ಮ ಶಾಲೆಯ ಶುಲ್ಕ ಮತ್ತು ಇತರ ಸೌಲಭ್ಯಗಳ ವಿವರಗಳನ್ನು 6*10 ಅಳತೆಯ ಫ್ಲೆಕ್ಸ್ ನಲ್ಲಿ ಪ್ರಕಟಿಸಿ ಶಾಲೆಯ ಹೊರಗೆ ಆವರಣದಲ್ಲಿ ನೇತು ಹಾಕಬೇಕು, ಅದು ಎಲ್ಲ ಪೋಷಕರಿಗೆ ಸರಿಯಾಗಿ ಗೋಚರವಾಗುವಂತಿರಬೇಕು ಎಂದು ಹೇಳಿದೆ.
ಈ ವಿವರಗಳನ್ನು ಇದೇ ತಿಂಗಳು 15ರೊಳಗೆ ಶಾಲೆಗಳಲ್ಲಿ ಪ್ರಕಟಿಸುವಂತೆ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಅರ್ಹ ಶಿಕ್ಷಕರನ್ನು ನೇಮಕ ಮಾಡಬೇಕು, ಅವರಿಗೆ ಶಿಕ್ಷಣ ಕಾಯ್ದೆಯಡಿ ಇರುವ ನಿಯಮದ ಪ್ರಕಾರ ವೇತನ ನೀಡಬೇಕು ಎಂದು ಕೂಡ ಸೂಚಿಸಲಾಗಿದೆ.
ಆರ್ ಟಿಇ ಕಾಯ್ದೆ ಪ್ರಕಾರ, ಪ್ರಾಥಮಿಕ ಹಂತದ ಶಿಕ್ಷಕರಿಗೆ ತಿಂಗಳಿಗೆ 25 ಸಾವಿರದ 800 ರೂಪಾಯಿ ವೇತನ ನೀಡಬೇಕು, ಹೈಸ್ಕೂಲ್ ವಿಭಾಗದ ಶಿಕ್ಷಕರಿಗೆ ತಿಂಗಳಿಗೆ 33 ಸಾವಿರದ 450 ರೂಪಾಯಿ ವೇತನ ನೀಡಬೇಕೆಂಬ ನಿಯಮವಿದೆ. ಬೋಧಕೇತರ ವರ್ಗಕ್ಕೆ ಪ್ರಥಮ ದರ್ಜೆ ಕ್ಲರ್ಕ್ ಗೆ ತಿಂಗಳಿಗೆ 27 ಸಾವಿರದ 650 ರೂಪಾಯಿ, ದ್ವಿತೀಯ ದರ್ಜೆ ಕ್ಲರ್ಕ್ ಗಳಿಗೆ ತಿಂಗಳಿಗೆ 21 ಸಾವಿರದ 400 ರೂಪಾಯಿ ವೇತನ ನೀಡಬೇಕೆಂಬ ಕಡ್ಡಾಯವಿದೆ. ಡಿ ಗ್ರೂಪ್ ನೌಕರರಿಗೆ ತಿಂಗಳಿಗೆ 17 ಸಾವಿರ ರೂಪಾಯಿ ವೇತನ ನೀಡಬೇಕೆಂದು ಆರ್ ಟಿಇ ಕಾಯ್ದೆಯಲ್ಲಿ ಹೇಳಲಾಗಿದೆ.
ಆರ್ ಟಿಇ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಶಾಲಾ ವ್ಯವಸ್ಥಾಪಕ ಮಂಡಳಿಗೆ ಎಚ್ಚರಿಕೆ ನೀಡಿದೆ. ಖಾಸಗಿ ಶಾಲೆಗಳ ವ್ಯವಸ್ಥಾಪಕ ಒಕ್ಕೂಟ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದೆ.
SCROLL FOR NEXT