ರಾಜ್ಯ

ವಿಷ ಪ್ರಸಾದ ದುರಂತ: ಸುಳ್ವಾಡಿ ದೇವಾಲಯ ಕೊನೆಗೂ ರಾಜ್ಯ ಸರ್ಕಾರದ ವಶಕ್ಕೆ

Srinivasamurthy VN
ಚಾಮರಾಜನಗರ: ಕಳೆದ ವರ್ಷದ ಡಿಸೆಂಬರ್‌ ನಲ್ಲಿ ವಿಷ ಪ್ರಸಾದ ದುರಂತಕ್ಕೆ ಸಾಕ್ಷಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ ಮಾರಮ್ಮ ದೇವಸ್ಥಾನವನ್ನು ಕೊನೆಗೂ ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ, ಕಂದಾಯ ಇಲಾಖೆ (ಮುಜರಾಯಿ) ಇದೇ ಫೆಬ್ರುವರಿ 26ರಂದು ಆದೇಶ ಹೊರಡಿಸಿದ್ದು ಅದನ್ನು ಏಪ್ರಿಲ್‌ 4ರ ರಾಜ್ಯ ಗೆಜೆಟ್‌ ನಲ್ಲಿ ಪ್ರಕಟಿಸಲಾಗಿದೆ. ಸ್ಥಳೀಯರು ಸೇರಿ ರಚಿಸಿಕೊಂಡಿದ್ದ ಟ್ರಸ್ಟ್‌ನ ಆಡಳಿತದಲ್ಲಿದ್ದ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಜಿಲ್ಲಾಧಿಕಾರಿ ಅವರು ಡಿಸೆಂಬರ್‌ 24ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತಾವನೆಯಲ್ಲಿ ಏನಿದೆ?:
'ಟ್ರಸ್ಟ್‌ನ ಸದಸ್ಯರುಗಳ ವೈಯಕ್ತಿಕ ವೈಮನಸ್ಸಿನಿಂದ ಮತ್ತು ದೇವಾಲಯದಲ್ಲಿನ ಹಣ ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರ/ಭಕ್ತಾದಿಗಳ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಿ ಪ್ರಾಣಹಾನಿಗೆ ಕಾರಣರಾಗಿದ್ದಾರೆ. ದೇವಾಲಯದ ಆಡಳಿತವನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಈ ಅವಘಡಕ್ಕೆ ಟ್ರಸ್ಟ್‌ ನ ಪದಾಧಿಕಾರಿಗಳು ಹೊಣೆಗಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ 1997ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆಯ ಸೆಕ್ಷನ್‌ 42 ಮತ್ತು 43ರ ಅನ್ವಯ ದೇಗುಲವನ್ನು ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಈ ಹಿಂದೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದರು.
ಈ ಶಿಫಾರಸ್ಸಿನ ಅನ್ವಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 2019ರ ಜನವರಿ 2ರಂದು ದೇವಾಲಯದ ಟ್ರಸ್ಟ್‌ ಸದಸ್ಯರಿಗೆ ನೋಟಿಸ್‌ ಜಾರಿ ಮಾಡಿ, 'ದೇಗುಲವನ್ನೇಕೆ ಸರ್ಕಾರದ ವಶಕ್ಕೆ ಪಡೆಯಬಾರದು' ಎಂದು ತಿಂಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದರು. ದೇವಾಲಯದ ಆಡಳಿತ ಹಾಗೂ ಚರ ಆಸ್ತಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ವಹಿಸಲು ಸಂಪೂರ್ಣ ಒಪ್ಪಿಗೆ ಇರುವುದಾಗಿ ಹನೂರು ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ಸಮ್ಮುಖದಲ್ಲಿ ಟ್ರಸ್ಟಿಗಳು ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿದ್ದರು.  ಇದರ ಆಧಾರದಲ್ಲಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆಯ ಸೆಕ್ಷನ್‌ 42 ಅನ್ವಯ ದೇವಾಲಯವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
2018ರ ಡಿಸೆಂಬರ್‌ 14ರಂದು ದೇವಾಲಯದಲ್ಲಿ ನಡೆದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿತರಿಸಲಾಗಿದ್ದ ವಿಷ ಬೆರೆಸಿದ ಪ್ರಸಾದ ಸೇವಿಸಿ ಸುಮಾರು 17 ಮಂದಿ ಮೃತಪಟ್ಟು, 110ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.
SCROLL FOR NEXT