ರಾಜ್ಯ

ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಕುವೆಂಪು ವಿ.ವಿ ಕಟ್ಟಡ ವಿಸ್ತರಣೆ; ಪರಿಸರವಾದಿಗಳ ವಿರೋಧ

Sumana Upadhyaya
ಬೆಂಗಳೂರು: ಭದ್ರಾ ಹುಲಿ ರಕ್ಷಿತಾರಣ್ಯದ ಲಕ್ಕವಳ್ಳಿ ವಲಯದ ಸಿಂಗನಮನೆ ಅರಣ್ಯ ಪ್ರದೇಶದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಚಟುವಟಿಕೆ ಕಾರ್ಯ ನಡೆಯುತ್ತಿದ್ದು ಇದಕ್ಕೆ ಪರಿಸರ ತಜ್ಞರು, ವನ್ಯಜೀವಿ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ಸ್ಟೇಡಿಯಂ, ಹಾಸ್ಟೆಲ್ ಮತ್ತು ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆಯುವ ಮುನ್ನವೇ ಅರಣ್ಯ ಇಲಾಖೆಯ ಪ್ರದೇಶಗಳನ್ನು ವಿಶ್ವವಿದ್ಯಾಲಯ ಅನುಮತಿ ನೀಡಿ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದೆ.
ಕುವೆಂಪು ವಿಶ್ವವಿದ್ಯಾಲಯದ ಎರಡನೇ ಸ್ಟೇಡಿಯಂ ನಿರ್ಮಾಣಕ್ಕೆ ಕಳೆದ ವರ್ಷ ವಿಶ್ವವಿದ್ಯಾಲಯ 30 ಎಕರೆ ಅರಣ್ಯ ಭೂಮಿಯನ್ನು ಮಂಜೂರು ಮಾಡಿತ್ತು. ಇದೀಗ ಅರ್ಧ ಕಿಲೋ ಮೀಟರ್ ನಷ್ಟು ರಸ್ತೆ ನಿರ್ಮಾಣ ಮಾಡುತ್ತಿದ್ದು ಅದು ಲಕ್ಕವಳ್ಳಿ ಅರಣ್ಯ ಪ್ರದೇಶದ ಅಲ್ದರ ವಲಯ ಪ್ರದೇಶದಲ್ಲಿದೆ. ಹೆಚ್ಚು ಅರಣ್ಯ ಭೂಮಿಯನ್ನು ಮಂಜೂರು ಮಾಡಿಸುವ ಮೂಲಕ ವಿಶ್ವವಿದ್ಯಾಲಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿದೆ ಎಂದು ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಇಲ್ಲಿ ಹುಲಿ ಮತ್ತು ಇತರ ವನ್ಯಜೀವಿಗಳು ನೆಲೆಸಿವೆ. ನಿರ್ಮಾಣ ಚಟುವಟಿಕೆಗಳಿಂದ ಅವುಗಳ ಇರುವಿಕೆಗೆ ತೊಂದರೆಯಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ಇಲಾಖೆಯಿದ್ದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ನೋವಿನ ಸಂಗತಿ ಎನ್ನುತ್ತಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯ ಮಾಡಬೇಕಾಗಿದ್ದು ಅದಕ್ಕೆ ಅನುಮತಿ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ ವಿಶ್ವವಿದ್ಯಾಲಯ ಅಧಿಕಾರಿಗಳು.
ಸುಮಾರು 323 ಎಕರೆ ಅರಣ್ಯ ಭೂಮಿಯನ್ನು ವಿಶ್ವವಿದ್ಯಾಲಯಕ್ಕೆ ಯಾವುದೇ ನಿರ್ಮಾಣ ಕಾರ್ಯ ಮಾಡುವುದಿದ್ದರೂ ಅನುಮತಿ ಪಡೆಯದೆ ಮಾಡುವಂತಿಲ್ಲ ಎಂಬ ಷರತ್ತಿನೊಂದಿಗೆ ನೀಡಲಾಗಿತ್ತು. ಈ ಮಧ್ಯೆ ಪ್ರತಿಕ್ರಿಯೆ ನೀಡಿದ ವನ್ಯಜೀವಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ್ ಎಸ್, ವಿಶ್ವವಿದ್ಯಾಲಯ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ, ಅದಿನ್ನೂ ಅನುಮೋದನೆಯಾಗಿ ಸಿಕ್ಕಿಲ್ಲ ಎಂದರು.
SCROLL FOR NEXT