ರಾಜ್ಯ

ಕಾರವಾರ: ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ, ನೌಕಾಪಡೆ ಅಧಿಕಾರಿ ಸಾವು

Lingaraj Badiger
ಕಾರವಾರ: ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದ ಬಾಯ್ಲರ್ ನಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಐಎನ್‍ಎಸ್ ವಿಕ್ರಮಾದಿತ್ಯ ಇಂದು ಬೆಳಗ್ಗೆ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ವೇಳೆ ನೌಕೆಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಯತ್ನಿಸಿದ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌವ್ಹಾಣ್ ಅವರು ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. 
ನೌಕಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ನೌಕೆಯ ಒಳಭಾಗದ ಬಾಯ್ಲರ್ ಕಂಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸುವ ಸಮಯದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌವ್ಹಾಣ್ ಮೃತಪಟ್ಟು, 7 ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಯ್ಲರ್ ನಲ್ಲಿದ್ದ ಬೆಂಕಿಯನ್ನು ಸಿಬ್ಬಂದಿ ನಿಯಂತ್ರಣಕ್ಕೆ ತಂದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. 
ಗಂಭೀರವಾಗಿ ಗಾಯಗೊಂಡ ಚೌವ್ಹಾಣ್ ಅವರನ್ನು ಕೂಡಲೇ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.
SCROLL FOR NEXT