ರಾಜ್ಯ

ರಾಯಚೂರಿನಲ್ಲಿ ಪ್ರವಾಹ: ಮುಳುಗಿದ ಹಳ್ಳಿ, ಸೇತುವೆ, ದೇವಾಲಯಗಳು

Lingaraj Badiger
ರಾಯಚೂರು: ಮಹಾರಾಷ್ಟ್ರದ ಕೃಷ್ಣ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣೆ  ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಪರಿಣಾಮ ಅನೇಕ ದೇವಾಲಯಗಳು, ರಸ್ತೆಗಳು, ಹಳ್ಳಿಗಳು, ಸೇತುವೆಗಳು ಮುಳುಗಡೆಯಾಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪಿದ್ದು, ಯಾವುದೇ ಸಮಯದಲ್ಲಿ ನೀರನ್ನು ಜಲಾಯಶದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೂ  ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ. 
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ  ಹೂವಿನಹಡಗಲಿ ಸೇತುವೆ ಮುಳುಗಡೆಯಾಗಿದೆ ಎಂದು ಕೃಷ್ಣ ಭಾಗ್ಯ ಜಲ ಭಾಗ್ಯ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾರಾಯಣಪುರ ಜಲಾಶಯದಿಂದ 2.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ನಂತರ ಈ ಪರಿಸ್ಥಿತಿ  ತಲೆದೋರಿದೆ.
ತಾಲೂಕಿನ ಹಂಚಿನಾಳ ಮತ್ತು ಶೀಲಹಳ್ಳಿ ಎರಡು ದಿನಗಳಿಂದ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ತೆವಾಡಾದಲ್ಲಿ ಸುಮಾರು 20 ಕುಟುಂಬಗಳು ಪ್ರವಾಹದ ತೊಂದರೆಗೆ ಸಿಲುಕಿದ್ದು ಅವರ ರಕ್ಷಣೆಗೆ ಅಧಿಕಾರಿಗಳು ದೌಡಾಯಿಸಿದ್ದಾರೆ.  
ಕಡದರಗಡ್ಡಿ, ಹಂಚಿನಾಳ, ಮದರಗಡ್ಡಿ, ಕರಕಲಗಡ್ಡಿ ಮತ್ತು ಹುಕಮ್ಮಗಡ್ಡಿ ಸೇರಿದಂತೆ ಹಲವು ಹಳ್ಳಿಗಳು ಪ್ರವಾಹದಿಂದ  ದ್ವೀಪಗಳಾಗಿ, ರಸ್ತೆ ಸಂಪರ್ಕ ಕಳೆದುಕೊಂಡಿವೆ  
ನದಿಯಲ್ಲಿ ಪ್ರವಾಹ ಹೆಚ್ಚಾದಂತೆ, ಹುವಿನಡಗಲಿಯ ಬಸವೇಶ್ವರ ಮತ್ತು ಅನಲಿಂಗೇಶ್ವರ ನರಸಿಂಹಸ್ವಾಮಿ, ಅಲ್ಲಮಪ್ರಭು ದೇವಾಲಯಗಳು ಭಾಗಶಃ ಮುಳುಗಡೆಯಾಗಿವೆ. ಈ ನಡುವೆ , ಆಲಮಟ್ಟಿ ಜಲಾಶಯದ ನೀರಿನ ಮಟ್ಟ 518 ಅಡಿಗೆ ತಲುಪಿದ್ದು ಜಲಾಶಯಕ್ಕೆ  1,50,409 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ  2,13,453 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT