ರಾಜ್ಯ

ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ

Raghavendra Adiga
ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆಯ 2018-19ನೇ ಸಾಲಿನ ಪರಿಷ್ಕೃತ ಆಯವ್ಯಯ ಮತ್ತು 2019-20ನೇ ಸಾಲಿನ ಆಯವ್ಯಯದ ಅಂದಾಜುಗಳಿಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಸರ್ಕಾರಿ ಆದೇಶವನ್ನು ಸರ್ಕಾರದ ಸಚಿವ ಸಂಪುಟ ಅನುಮೋದನೆಯಿಲ್ಲದೇ ಮಾಡಿರುವುದು ಕಾನೂನುಬಾಹಿರವಾಗಿದೆ. ಆದುದರಿಂದ ಬಿಬಿಎಂಪಿ ಆಯವ್ಯಯಕ್ಕೆ ಸಚಿವ ಸಂಪುಟ ಅನುಮೋದನೆಯನ್ನು ಪಡೆದು ಸರ್ಕಾರಿ ಆದೇಶವನ್ನು ಅತೀ ಶೀಘ್ರದಲ್ಲಿ ಹೊರಡಿಸಲಾಗುವುದು. ಅಲ್ಲಿಯವರೆಗೂ ಆಯವ್ಯಯದ ಅನುಷ್ಠಾನದ ಜಾಬ್ ಕೋಡ್ ನೀಡುವುದನ್ನು ಮತ್ತು ಟೆಂಡರ್ ಕರೆಯುವುದನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಅದೇ ರೀತಿ 2018-19ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2018-19, 2019-20 ಮತ್ತು 2020-21ರ ಆರ್ಥಿಕ ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಮುಂದಿನ ಆದೇಶದವರೆಗೂ ಯಾವುದೇ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡುವುದಾಗಲೀ, ಅಥವಾ ಟೆಂಡರ್ ಕರೆಯುವುದನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಆದೇಶದಲ್ಲಿ ತಿಳಿಸಿದ್ದಾರೆ.
SCROLL FOR NEXT